ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ಆಕ್ಸಿಜನ್ ಘಟಕದಿಂದ ಪ್ರತಿನಿತ್ಯ 150 ಆಕ್ಸಿಜನ್ ಸಿಲಿಂಡರ್ಗಳು ಲಭ್ಯವಾಗಲಿವೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಇಂದು ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಆಕ್ಸಿಜನ್ ಪ್ಲಾಂಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಇಲ್ಲಿನ ವಿಐಎಸ್ಎಲ್ ಹಾಗೂ ಬಲ್ಡೊಟಾದ ಎಂಎಸ್ ಪಿಎಲ್ ನ ಆಕ್ಸಿಜನ್ ಉತ್ಪಾದನಾ ಘಟಕದಲ್ಲಿ ಪ್ರತಿದಿನ 500 ಆಕ್ಸಿಜನ್ ಸಿಲಿಂಡರ್ ಉತ್ಪಾದನೆ ಮಾಡಬಹುದಾಗಿದೆ. ಆದರೆ ಈಗ ಕಂಪ್ರೈಸರ್, ಸಿಲಿಂಡರ್ ಹಾಗೂ ಕಂಟೈನರ್ ಗಳ ಅವಶ್ಯಕತೆ ಇದೆ. ಇದರಿಂದ ಸರ್ಕಾರ ಎಲ್ಲವನ್ನು ನೀಡಲು ಸಿದ್ಧವಿದೆ ಎಂದರು.
ವಿಐಎಸ್ಎಲ್ ನ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಇದರ ಜೊತೆಗೆ ಎಂಎಸ್ ಪಿ ಎಲ್ ನ ರಾಹುಲ್ ಬಲ್ಡೊಟಾ ಅವರ ಜೊತೆ ಮಾತನಾಡಿ ಇಂದಿನಿಂದಲೇ ಆಕ್ಸಿಜನ್ ಉತ್ಪಾದನೆ ಮಾಡುವಂತೆ ವಿನಂತಿಸಿಕೊಳ್ಳಾಗಿದೆ. ಹೀಗಾಗಿ ಇವತ್ತಿನಿಂದಲೇ ಆಕ್ಸಿಜನ್ ಉತ್ಪಾದನೆ ಪ್ರಾರಂಭವಾಗಿದೆ. ಎಂಎಸ್ ಪಿಎಲ್ ನವರು ಆಕ್ಸಿಜನ್ ಉತ್ಪಾದನೆ ಮಾಡುತ್ತಾರೆ. ಇದನ್ನು ವಿಐಎಸ್ಎಲ್ ನವರು ಸಿಲಿಂಡರ್ ನಲ್ಲಿ ತುಂಬುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.
ಆಕ್ಸಿಜನ್ ಮಹತ್ವ ಈಗ ತಿಳಿದಿದೆ ಎಂದ ಶೆಟ್ಡರ್:
ನನ್ನ ಇಷ್ಟು ದಿನದ ರಾಜಕೀಯ ಜೀವನದಲ್ಲಿ ಆಕ್ಸಿಜನ್ ಗೆ ಇಷ್ಟೊಂದು ಬೇಡಿಕೆ ಬಂದಿದ್ದನ್ನು ನೋಡಿರಲಿಲ್ಲ. ಅಲ್ಲದೆ ಕೂರೂನಾ ಒಂದೇ ಸಲ ಇಷ್ಟೊಂದು ಏರಿಕೆ ಆಗುತ್ತದೆ ಎಂದು ಯಾರಿಗೂ ಊಹಿಸಲು ಸಾಧ್ಯವಾಗಿರಲಿಕ್ಕಿಲ್ಲ. ಕಳೆದ ವರ್ಷ 4-5 ಸಾವಿರ ಕೊರೂನಾ ಕೇಸ್ ಬಂದ್ರೆ ಅದೇ ಜಾಸ್ತಿ, ಹೇಗೆ ಕಂಟ್ರೋಲ್ ಮಾಡೋದು ಅಂತ ಯೋಚನೆ ಮಾಡ್ತಾ ಇದ್ವಿ. ಈಗ ದಿನಕ್ಕೆ ಕನಿಷ್ಠ 50 ಸಾವಿರ ಪಾಸಿಟಿವ್ ಕೇಸ್ಗಳು ಬರ್ತಿವೆ. ಇದರಿಂದ ಒಂದೇ ಸಲಕ್ಕೆ ಬೆಡ್ ಹಾಗೂ ಆಕ್ಸಿಜನ್ ಪೂರೈಕೆ ಸಾಧ್ಯವಾಗದೆ ಇರಬಹುದು. ಆದರೆ ಸರ್ಕಾರ ಎಲ್ಲವನ್ನು ಸರಿಪಡಿಸುತ್ತದೆ ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ವಿಐಎಸ್ಎಲ್ ನಲ್ಲಿ ಆಕ್ಸಿಜನ್ ಘಟಕದಲ್ಲಿ ಉತ್ಪಾದನೆಯಾದ ಆಕ್ಸಿಜನ್ ಅನ್ನು ಕಂಪ್ರೈಜರ್ ಮಾಡಿ ಅದನ್ನು ಬಾಟ್ಲಿಂಗ್ ಮಾಡಿ ಕಳುಹಿಸಬೇಕಿದೆ. ಇದಕ್ಕಾಗಿ ಸದ್ಯ ಕಂಪ್ರೈಸರ್, ಸಿಲಿಂಡರ್ ಹಾಗೂ ಇದನ್ನು ಸಾಗಿಸಲು ಕಂಟೈನರ್ ಬೇಕಾಗಿದೆ. ಇದನ್ನು ಪೂರೈಸುವತ್ತ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಕ್ರಮ ಜರುಗಿಸಬೇಕಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ನಮ್ಮ ಶಿವಮೊಗ್ಗ ಜಿಲ್ಲೆ ಉತ್ತಮ ಸ್ಥಿತಿಯಲ್ಲಿದೆ ಎಂದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂಬ ಬೋರ್ಡ್ ಹಾಕಿರುವ ಬಗ್ಗೆ ನನಗೆ ತಿಳಿದಿಲ್ಲ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ಕಾರ್ಖಾನೆ ಪ್ರಾರಂಭಕ್ಕೆ ಇಲ್ಲದ ಆಸಕ್ತಿ ಆಕ್ಸಿಜನ್ ಪ್ಲಾಂಟ್ ಗೆ ಏಕೆ:
ವಿಐಎಸ್ಎಲ್ ಕಾರ್ಖಾನೆ ನಿಂತು ನಾಲ್ಕೈದು ವರ್ಷಗಳಾಗಿವೆ. ಆಗ ಸರ್ಕಾರ ಕಾರ್ಖಾನೆ ಪ್ರಾರಂಭಕ್ಕೆ ತೋರದ ಆಸಕ್ತಿಯನ್ನು ಆಕ್ಸಿಜನ್ ಪ್ಲಾಂಟ್ ತಯಾರಿಗೆ ಏಕೆ ತೋರುತ್ತಿದೆ ಎಂಬ ಪ್ರಶ್ನೆಗಳು ಜಿಲ್ಲೆಯಲ್ಲಿ ಕೇಳಿಬಂದಿವೆ.