ರಾಮನಗರ: ಶಕ್ತಿಯ ಅನುಗ್ರಹ ಇಲ್ಲದೇ ಇಷ್ಟು ದೊಡ್ಡ ಮಟ್ಟಕ್ಕೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಈ ಕ್ಷೇತ್ರದ ಬಗ್ಗೆ ಕೆಲವು ತಿಂಗಳ ಹಿಂದೆ ಮಾಹಿತಿ ಕೊಟ್ಟಿದ್ರು. ಕ್ಷೇತ್ರದ ಮಹಿಮೆಯಿಂದಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಶ್ರೀ ಕ್ಷೇತ್ರದ ಚಾಮುಂಡೇಶ್ವರಿ ತಾಯಿಗೆ ಶಕ್ತಿ ಇರುವುದರಿಂದಲೇ ಜನಸಾಗರ ಸೇರಿದೆ. ಹೀಗಾಗಿ ಪವಿತ್ರವಾದ ಈ ದಿನದಂದು ನಾನು ಭೇಟಿ ಕೊಟ್ಟಿದ್ದೇನೆ. ತಾಯಿಯ ಅನುಗ್ರಹ ರಾಜ್ಯದ ಜನರ ಮೇಲಿರಲಿ. ಎಲ್ಲಾ ದುಃಖಗಳನ್ನು ತಾಯಿ ನಿವಾರಣೆ ಮಾಡಲಿ ಎಂದರು.
ಹಾಗೆಯೇ ಇದೇ ತಿಂಗಳ 30 ರಂದು ದೆಹಲಿಗೆ ಹೋಗಲಿದ್ದೇನೆ. ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದೇನೆ. ಕೆಲವರು ಸಾಕಷ್ಟು ಆಸೆ ಪಡ್ತಾ ಇದ್ದಾರೆ. ಬಹಳ ಜನರಿಗೆ ಆಸೆಯಿದೆ, ಸ್ವ-ಪಕ್ಷದವರೋ ವಿರೋಧ ಪಕ್ಷದವರೋ ಗೊತ್ತಿಲ್ಲ. ಮತ್ತೆ ನನಗೆ ಇಡಿಯಲ್ಲಿ ಸಿಲುಕಿಸಲು ತಯಾರಿ ನಡೆಯುತ್ತಿದೆ. ಆದರೆ ಚಾಮುಂಡಿ ತಾಯಿ ಇದ್ದಾಳೆ. ನನ್ನನ್ನು ರಕ್ಷಣೆ ಮಾಡ್ತಾಳೆ. ನಾನೇನಾದ್ರೂ ತಪ್ಪು ಮಾಡಿದ್ರೆ, ತೊಂದರೆ ಮಾಡ್ತಾರೆ. ನಾನೇನು ತಪ್ಪು ಮಾಡಿಲ್ಲ, ಅಂದ್ರೆ ದೇವಿನೇ ಎಲ್ಲಾ ನೋಡಿಕೊಳ್ಳುತ್ತಾಳೆ ಎಂದರು.
ಇದಲ್ಲದೆ ನನಗೆ ಖೆಡ್ಡಾ ತೋಡಲು ಏನು ಬೇಕೊ ಎಲ್ಲಾ ಮಾಡ್ತಾ ಇದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನೇ ಬಿಟ್ಟಿಲ್ಲ. ಇನ್ನು ನನ್ನನ್ನು ಬಿಡ್ತಾರಾ? ಎಲ್ಲಾ ನನ್ನ ವೈರಿಗಳು, ತೊಂದರೆ ಕೊಡುವುದನ್ನು ದೂರ ಮಾಡು ಎಂದು ದೇವಿಯಲ್ಲಿ ಬೇಡಿಕೊಂಡಿದ್ದೇನೆ ಎಂದು ತಿಳಿಸಿದರು.
ಸಿಎಂ ಜನೋತ್ಸವ ರದ್ದು: ಈ ವಿಚಾರವಾಗಿ ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ಸಿಎಂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಜನೋತ್ಸವ ಮಾಡುವಂತಹ ಅವಶ್ಯಕತೆ ಇರಲಿಲ್ಲ ಎಂದು ಮೊದಲೇ ಹೇಳಿದ್ದೆ. ಕಾರ್ಯಕರ್ತರ ನೋವಿನ ಅರಿವಿದೆ. ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಯಾರೇ ತಪ್ಪು ಮಾಡಿದ್ರೂ, ಸಿಎಂ ಅವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಏನೆಲ್ಲಾ ಕಾನೂನುಗಳಿವೆ, ಬಂಧಿಸಿ ಶಿಕ್ಷೆ ಕೊಡಿಸುವ ಕೆಲಸ ಆಗಬೇಕು. ಈ ಮೂಲಕ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಇದೇ ವೇಳೆ ಹೇಳಿದರು.
ಸರ್ಕಾರದ ಇಂಟಲಿಜೆನ್ಸ್ ವಿಫಲ: ಪ್ರವೀಣ್ ನೆಟ್ಟಾರು ಹತ್ಯೆ ವಿಚಾರವಾಗಿ ಸರ್ಕಾರದ ಇಂಟಲಿಜೆನ್ಸ್ ಫೆಲ್ಯೂರ್ ಮಾಡಿರೋದು ಯಾರು. ಕಾಂಗ್ರೆಸ್ ಸರ್ಕಾರನಾ? ಕಾಂಗ್ರೆಸ್ನವರ? ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಸರ್ಕಾರದ ವಿರುದ್ಧ ವಾದ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಜನಪರ ಕೆಲಸ ಮಾಡೋಕೆ ಬರೋದಿಲ್ಲ. ಯುವಕರ ಜೀವನದ ಬಗ್ಗೆ ಕಾಳಜಿ ಇಲ್ಲ. ಅದು ಬಿಜೆಪಿಯವರಾಗಲಿ, ಕಾಂಗ್ರೆಸ್ನವರಾಗಲಿ, ಎಸ್ಡಿಪಿಐ ಆಗಲಿ. ಯಾವುದೇ ಯುವಕನ ಜೀವನ ಹಾಳು ಮಾಡಬಾರದು. ಅದರಲ್ಲಿ ರಾಜಕಾರಣ ಮಾಡಬಾರದು. ಯಾರೇ ತಪ್ಪು ಮಾಡಿದ್ರೂ ಅವರನ್ನು ಬಂಧಿಸಿ ಒಳಗೆ ಹಾಕಬೇಕು ಎಂದರು.
ಇದನ್ನೂ ಓದಿ: ಭಯೋತ್ಪಾದನೆ ಹತ್ತಿಕ್ಕಲು ಯಾವುದೇ ಮಾದರಿಯಾದರೂ ಜಾರಿ ಮಾಡುತ್ತೇವೆ: ಸಚಿವ ಆರ್. ಅಶೋಕ್
ಪ್ರಕರಣದ ಬಂಧಿತರನ್ನು ಎನ್ ಕೌಂಟರ್ ಮಾಡುವ ವಿಚಾರವಾಗಿ ಅದರ ಬಗ್ಗೆ ನಾನೇನು ಮಾತನಾಡಲು ಬರುವುದಿಲ್ಲ. ಕಾನೂನು ಬದ್ಧವಾಗಿ ಏನೆಲ್ಲಾ ಮಾಡಬಹುದೋ ಅದನ್ನು ಮಾಡಲಿ. ಯುವಕರ ಜೀವನ ಸೇಫ್ ಇಲ್ಲ. ಅಧಿಕಾರ ಇರುವ ಪಕ್ಷದ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಇನ್ನು ಸಾಮಾನ್ಯರಿಗೆ ರಕ್ಷಣೆ ಸಿಗುತ್ತಾ? ಎಂದು ನಲಪಾಡ್ ಪ್ರಶ್ನಿಸಿದರು.
ಎಸ್ಡಿಪಿಐ, ಪಿಎಫ್ಐ ಬ್ಯಾನ್ ಮಾಡುವ ವಿಚಾರವಾಗಿ, ನಾವು ಕೂಡ ಹೇಳ್ತಾ ಇದ್ದೀನಿ, ಡಬಲ್ ಇಂಜಿನ್ ಸರ್ಕಾರ ಇದೆ. ನಿಮಗೆ ನಿಜವಾಗಿಯೂ ತಾಕತ್ ಇದ್ದರೆ ಅವನ್ನು ಬ್ಯಾನ್ ಮಾಡಿ. ಎಸ್ಡಿಪಿಐ, ಪಿಎಫ್ಐ ಜೊತೆ ಬಜರಂಗದಳವನ್ನು ಸಹ ಬ್ಯಾನ್ ಮಾಡಿ. ಆರ್ಎಸ್ಎಸ್ ಕೂಡ ಅದೇ ಜಾತಿಗೆ ಸೇರಿರುವಂತದ್ದೆ, ಅದನ್ನು ಕೂಡ ಧೈರ್ಯ ಇದ್ರೆ ಸರ್ಕಾರ ಬ್ಯಾನ್ ಮಾಡಲಿ ನೋಡೋಣ ಎಂದು ಸರ್ಕಾರ ವಿರುದ್ಧ ನೇರ ವಾಗ್ದಾಳಿ ನಡೆಸಿದರು.