ರಾಮನಗರ : ಆನ್ಲೈನ್ ಶಿಕ್ಷಣವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮದು ಬಡರಾಷ್ಟ್ರ ಎಷ್ಟೋ ಹಳ್ಳಿಗಳಲ್ಲಿ ಮೊಬೈಲ್ ವ್ಯವಸ್ಥೆ ಇಲ್ಲ. ಮೊಬೈಲ್ ಕೊಂಡುಕೊಳ್ಳಲು ಜನರ ಬಳಿ ಹಣವಿಲ್ಲ, ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಆನ್ಲೈನ್ ಶಿಕ್ಷಣ ವ್ಯವಸ್ಥೆ ರೂಪಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಮುಖ್ಯವಾಗಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣರಾಗಿ ಮಾಡಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬಾರದು, ಈಗಾಗಲೇ ತೆಲಂಗಾಣದಲ್ಲಿ ಎಲ್ಲಾ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಮಾಡಬೇಕು ಎಂದು ಒತ್ತಾಯಿಸಿದರು.
ದೆಹಲಿ, ಮಹಾರಾಷ್ಟ್ರ ಸೇರಿ 12 ರಾಜ್ಯಗಳಲ್ಲಿ ಎಲ್ಲಾ ಪರೀಕ್ಷೆ ಮುಂದೂಡಿದ್ದಾರೆ. ಜೀವ ಇದ್ದರೆ ಜೀವನ, ಹಾಗಾಗಿ ನಮ್ಮ ರಾಜ್ಯ ಸರ್ಕಾರ ಕೂಡ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳ ಪರೀಕ್ಷೆ ಮುಂದೂಡಬೇಕೆಂದು ವಾಟಾಳ್ ನಾಗರಾಜ್ ಹೇಳಿದರು.