ರಾಮನಗರ: ಅನಾಮಧೇಯ ಫೋನ್ ಕಾಲ್ನಿಂದಾಗಿ ಮದುವೆಯೊಂದು ಮುರಿದು ಬಿದ್ದ ಪ್ರಸಂಗ ನಡೆದಿದೆ. ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ನಡೆಯ ಬೇಕಿದ್ದ ಮದುವೆ ದಿಢೀರ್ ರದ್ದುಗೊಂಡಿದೆ. ಮದುವೆ ತಯಾರಿಯಲ್ಲಿದ್ದ ಹೆಣ್ಣಿನ ಮನೆಯವರಿಗೆ ಫೋನ್ ಕರೆಯೊಂದು ಬಂದಿದ್ದು, ಮದುವೆ ಗಂಡಿಗೆ ಈ ಮೊದಲೇ ಮದುವೆಯಾಗಿ ಮಕ್ಕಳಿವೆ ಎನ್ನುವ ಸುದ್ದಿ ಹೇಳಿ ಕಾಲ್ ಕಟ್ ಮಾಡಿದ್ದಾರೆ. ಇದರಿಂದಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಮದುವೆ ರದ್ದುಗೊಂಡಿದೆ.
ನಗರದ ಎಲೆಕೇರಿ ಬಡಾವಣೆಯ ಭಾಗ್ಯಶ್ರೀ ಎಂಬ ವಧು ಹಾಗೂ ಎಲಿಯೂರು ಗ್ರಾಮದ ಬಸವರಾಜುವಿಗೆ ಮದುವೆ ನಿಶ್ಚಯವಾಗಿ ಆರು ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದಿತ್ತು. ಭರ್ಜರಿಯಾಗಿ ಮದುವೆ ತಯಾರಿ ನಡೆದು ಕಲ್ಯಾಣ ಮಂಟಪಕ್ಕೆ ಬಂದ ಬಳಿಕ ಈ ಹೈಡ್ರಾಮ ನಡೆದಿದೆ. ಇನ್ನು, ವರ ಬಸವರಾಜು ಆರೋಪ ಸಾಬೀತಿಗೆ ಪಟ್ಟು ಹಿಡಿದಿದ್ದು, ಕರೆ ಮಾಡಿದ ವ್ಯಕ್ತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು, ಅಂತಿಮವಾಗಿ ಮದುವೆಗೆ ನಿರಾಕರಿಸಿದ ಹೆಣ್ಣಿನ ಮನೆಯವರು, ಬೇರೊಬ್ಬ ವರನೊಂದಿಗೆ ಮಗಳನ್ನು ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದರು. ಎಲೆಕೇರಿ ಗ್ರಾಮದ ಆನಂದ್ನೊಂದಿಗೆ ಭಾಗ್ಯಶ್ರೀ ಮದುವೆಗೆ ಹಿರಿಯರು ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.