ರಾಮನಗರ: ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹೆದ್ದಾರಿಯಲ್ಲಿ ಹಂಪ್ಸ್ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಬೈಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಮನಗರ ಹೊರವಲಯದ ಜಿಲ್ಲಾಧಿಕಾರಿ ವಸತಿ ಗೃಹದ ಬಳಿಯೇ ನಡೆದಿದೆ.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ದಿಡೀರ್ ಹಂಪ್ಸ್ ನಿರ್ಮಾಣ ಮಾಡಬಾರದು ಎಂಬ ಕಾನೂನಿದ್ದರೂ ಅವೈಜ್ಞಾನಿಕವಾಗಿ ಹೆದ್ದಾರಿಯಲ್ಲಿ ಹಂಪ್ಸ್ ಹಾಕುವ ಸಾಹಸಕ್ಕೆ ಅಧಿಕಾರಿಗಳು ಮುಂದಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅವೈಜ್ಞಾನಿಕವಾಗಿ ಡಿಸಿ ಕಚೇರಿ ಹಾಗೂ ಡಿಸಿ ವಸತಿ ಗೃಹದ ಬಳಿ ನಿರ್ಮಿಸಿರೋ ಹಂಪ್ಸ್ ಅಪಘಾತಗಳ ಕೇಂದ್ರ ಬಿಂದುವಾಗಿವೆ. ಇಂದು ಹಮ್ಸ್ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಮೊದಲ ಅಪಘಾತ ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅವಘಡಗಳಿಗೆ ಮುನ್ಸೂಚನೆ ನೀಡಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಹಂಪ್ಸ್ ಕಾಮಗಾರಿ ವೇಳೆ ಬ್ಯಾರಿಕೇಡ್ ಅಳವಡಿಸಿದೇ ಕೆಲಸಗಾರರು ಕಾಮಗಾರಿ ನಡೆಸುತ್ತಿದ್ದರು. ಇದರಿಂದಾಗಿ ಅಪಘಾತವಾಗಿದೆ ಎನ್ನುವ ಅಧಿಕಾರಿಗಳು, ಹೆದ್ದಾರಿಯಲ್ಲಿ ದಿಢೀರ್ ಹಂಪ್ಸ್ ನಿರ್ಮಾಣ ತಂದೊಡ್ಡುವ ಅವಘಡದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಏಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿ ಆಗಿರೋದ್ರಿಂದ ವಾಹನಗಳು ಸಹಜವಾಗಿಯೇ ವೇಗವಾಗಿ ಚಲಿಸುತ್ತಿರುತ್ತವೆ. ಅಂತಹದ್ದರಲ್ಲಿ ದಿಢೀರ್ ಅಂತಾ ಹಂಪ್ಸ್ ನಿರ್ಮಿಸೋದು ಅಪಘಾತ ಹೆಚ್ಚಳಕ್ಕೆ ಕಾರಣವಾಗಲಿದೆ ಎನ್ನಲಾಗುತ್ತಿದೆ.