ರಾಮನಗರ: ವಾಹನ ತಯಾರಿಕಾ ಕ್ಷೇತ್ರದಲ್ಲಿ ಅಗ್ರಗಣ್ಯ ಕಾರ್ಖಾನೆಯ ಪೈಕಿ ಒಂದಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ತನ್ನ ಬಿಡದಿ ತಯಾರಿಕಾ ಘಟಕಕ್ಕೆ ಬೇಕಾದ ಶೇ. 100ರಷ್ಟು ವಿದ್ಯುತ್ ಅನ್ನು ಸೌರ ವಿದ್ಯುತ್ ಮತ್ತು ನವೀಕರಿಸುವ ಶಕ್ತಿ ಮೂಲಗಳಿಂದ ಪಡೆದುಕೊಳ್ಳುತ್ತಿದೆ. ಈ ಕುರಿತು ಕಂಪನಿಯ ಜನರಲ್ ಮ್ಯಾನೇಜರ್ ರಾಜೇಂದ್ರ ಹೆಗ್ಡೆ ಮಾಹಿತಿ ನೀಡಿದ್ದಾರೆ.
ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಆವರಣದಲ್ಲಿ ಅವರು ಮಾತನಾಡಿದರು. ಕಳೆದ ಜೂನ್ ನಿಂದ ಈ ಸಾಧನೆಗೈದಿದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್ ನ ವಿದ್ಯುತ್ ಸರಬರಾಜಿನ ಮೇಲೆ ಅವಲಂಬನೆ ಕಡಿಮೆಯಾಗಿದೆ. 2040ರ ವೇಳೆಗೆ ತಮ್ಮ ಕಾರ್ಖಾನೆಯ ತಯಾರಿಕಾ ವ್ಯವಸ್ಥೆಯಲ್ಲಿ ಇಂಗಾಲದ ಡೈ ಆಕ್ಷೈಡ್ ಉತ್ಪಾದನೆ ಶೂನ್ಯಕ್ಕೆ ಇಳಿಸುವುದು ಟೊಯೋಟಾದ ಗುರಿ. ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆಗಳು ಆಗುತ್ತಿವೆ ಎಂದರು.
ನೀರಿನ ವ್ಯವಸ್ಥೆ ಹೇಗಿದೆ?
ಟೊಯೋಟಾ ಕಾರ್ಖಾನೆಗೆ ಸೇರಿದ 432 ಎಕರೆ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದೆ. ಇದೇ ನೀರನ್ನು ಸಂಸ್ಕರಿಸಿ ವಾಹನ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಕಾವೇರಿ ನೀರು ಕೇವಲ ಮಾನವ ಬಳಕೆಗೆ ಮಾತ್ರ ಸೀಮಿತವಾಗಿದೆ. ಕಾರ್ಖಾನೆಗೆ ಬೇಕಾದ ಶೇ 90ರಷ್ಟು ನೀರನ್ನು ಪುನರ್ ಬಳಕೆಯಿಂದಲೇ ಪಡೆಯಲಾಗುತ್ತಿದೆ.
ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಒತ್ತು:
ಸದ್ಯ ಬಿಡದಿ ಕಾರ್ಖಾನೆಯಲ್ಲಿ ಅತ್ಯಂತ ವೇಗವಾಗಿ ಒಂದು ಇನ್ನೋವಾ ಅಥವಾ ಫಾರ್ಚುನರ್ ಕಾರು ಉತ್ಪಾದನೆಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಇಂಧನ ಚಾಲಿತ ವಾಹನಗಳ ಬೇಡಿಕೆ ಕಡಿಮೆಯಾಗಲಿದೆ. ವಿದ್ಯುತ್ ಚಾಲಿತ ಕಾರುಗಳು ಮುಂದಿನ ಭವಿಷ್ಯವಾಗಲಿವೆ. ಹೀಗಾಗಿ ತಮ್ಮ ಸಂಸ್ಥೆಯೂ ಸಹ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದು ಹೆಗ್ಡೆ ತಿಳಿಸಿದರು.
ಸಾಮಾಜಿಕ ಚಟುವಟಿಕೆಗಳಿಗೂ ಪ್ರಾಮುಖ್ಯತೆ:
ಕಳೆದ ಮೂರು ವರ್ಷಗಳಲ್ಲಿ ಟೊಯೋಟಾ ಸುಮಾರು 17 ಸಾವಿರ ಕೋಟಿ ರೂ. ಮೊತ್ತವನ್ನು ವಿವಿಧ ತೆರಿಗೆ ರೂಪದಲ್ಲಿ ಪಾವತಿಸಿದೆ. ಸಂಸ್ಥೆಯ ಸಾಮಾಜಿಕ ಚಟುವಟಿಕೆಗಳು (ಸಿಎಸ್‌ಆರ್) ಬಿಡದಿ ಸುತ್ತಮುತ್ತಲ ಪ್ರದೇಶಗಳು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚು ನಡೆಯುತ್ತಿದೆ. ಶಿಕ್ಷಣ, ರಸ್ತೆ ಸುರಕ್ಷತೆ, ಪರಿಸರ ಸಂರಕ್ಷಣೆ ಮತ್ತು ತರಬೇತಿ, ವೈಯಕ್ತಿಕ ಸ್ವಚ್ಛತೆ, ಕ್ರೀಡೆಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ.
ಸರ್ಕಾರಕ್ಕೆ ಸಹಕಾರ:
ಜಿಲ್ಲೆಯಲ್ಲಿ 30 ಮಾದರಿ ಅಂಗನವಾಡಿ ಕೇಂದ್ರಗಳು, 11 ಶಾಲಾ ಕಟ್ಟಡಗಳು, ಪೊಲೀಸರಿಗಾಗಿ ಟ್ರಾಫಿಕ್ ತರಬೇತಿ ಕೇಂದ್ರ, 43 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಕೋವಿಡ್ ಸೋಂಕು ಚಿಕಿತ್ಸೆ ಮತ್ತು ನಿಯಂತ್ರಣಕ್ಕೆ ತಮ್ಮ ಸಂಸ್ಥೆ ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಸಹಕಾರ ನೀಡುತ್ತಿದೆ. 9.5 ಕೋಟಿ ರೂ. ವೆಚ್ಚದಲ್ಲಿ ಸಾಧನ, ಸಲಕರಣೆಗಳನ್ನು ಒದಗಿಸಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬೀದಿ ನಾಯಿಯ ಜನ್ಮದಿನವನ್ನ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಆಚರಿಸಿದ ಚಿಕ್ಕಬಳ್ಳಾಪುರ ಜನತೆ!
ಟೊಯೋಟಾ ತನ್ನಲ್ಲಿ ಕೆಲಸ ಮಾಡುವ ಕಾರ್ಮಿಕರ ಕ್ಷೇಮಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಕಾರ್ಮಿಕರು ತಮ್ಮ ಕುಟುಂಬದೊಂದಿಗೂ ಹೆಚ್ಚು ಸಮಯ ವ್ಯಯಿಸಬೇಕಾಗಿದೆ. ಹೀಗಾಗಿ ವರ್ಷದಲ್ಲಿ 275 ದಿನಗಳು ಮಾತ್ರ ಅವರಿಗೆ ಕೆಲಸ ಇರಲಿದೆ. 20 ವರ್ಷಗಳಿಂದ ನಿರಂತರ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಬಡ್ತಿ ಪಡೆದು ಮಾಸಿಕ ಸುಮಾರು ೧ ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ. ಕೋವಿಡ್ ಕಾರಣ ಕಳೆದೆರೆಡು ವರ್ಷಗಳಲ್ಲಿ ಬೇಡಿಕೆ ಮತ್ತು ಉತ್ಪಾದನೆ ಕುಸಿದಿದ್ದರೂ ಸಹ ಕಾರ್ಮಿಕರಿಗೆ ಬೋನಸ್ ನೀಡಲಾಗಿದೆ ಎಂದು ವಿವರಿಸಿದರು.