ರಾಮನಗರ: ಚನ್ನಪಟ್ಟಣದಲ್ಲಿ ಮೂರ್ನಾಲ್ಕು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಇಂದಿರಾ ಕಾಟೇಜ್ನಲ್ಲಿ ನಡೆದಿದೆ.
ಬೀದಿ ನಾಯಿಗಳ ದಾಳಿಗೆ ಬಾಲಕ ತಸೀರ್ ಗಾಯಗೊಂಡಿದ್ದು, ಇಂದಿರಾ ಕಾಟೇಜ್ ನಿವಾಸಿ ಖಲೀಂ ಎಂಬುವರ ಮಗ ಎಂದು ತಿಳಿದುಬಂದಿದೆ. ಈತನ ಜತೆ ಇನ್ನಿಬ್ಬರು ಮಕ್ಕಳ ಮೇಲೆಯೂ ನಾಯಿಗಳು ದಾಳಿ ನಡೆಸಿವೆ. ಮನೆಯ ಬಳಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮಕ್ಕಳನ್ನು ಕಚ್ಚಿದ್ದು ತೊಡೆ, ಕೈ-ಕಾಲಿನ ಭಾಗಗಳಿಗೆ ಗಾಯವಾಗಿದೆ.
ಗಂಭೀರವಾಗಿ ಗಾಯಗೊಂಡ ಬಾಲಕ ತಸೀರ್ನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದಿರಾ ಕಾಟೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದ್ದು, ನಗರಸಭೆ ಆಡಳಿತ ಇತ್ತಕಡೆ ಗಮನಹರಿಸಿ, ಬೀದಿನಾಯಿಗಳನ್ನು ನಿಯಂತ್ರಣ ಮಾಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.