ರಾಮನಗರ: ಮಹಾ ಶಿವರಾತ್ರಿ ಪ್ರಯುಕ್ತ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಇಂದು ಭಕ್ತರಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾತ್ರಿ ಶಿವ ಭಜನೆ ನಡೆಯಿತು. ಬೆಳಗ್ಗೆ 5 ಗಂಟೆಯಿಂದಲೇ ಶಿವನಿಗೆ ಪೂಜೆಗಳು ನಡೆದವು.
ಇಲ್ಲಿ ಪ್ರತಿ ವರ್ಷ ನಡೆಯುವ ಅನ್ನದಾನ ಕಾರ್ಯಕ್ರಮದಲ್ಲಿ ಚನ್ನಪಟ್ಟಣ, ರಾಮನಗರ ಹಾಗೂ ಸುತ್ತಮುತ್ತಲಿನ ಜನರು ಭಾಗಿಯಾಗುತ್ತಾರೆ. ಇಂದಿನ ಅನ್ನದಾನ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಭಕ್ತರಿಗೆ ಪ್ರಸಾದ ತಯಾರಿಸಲಾಗಿತ್ತು ಎಂದು ಕಾಶಿ ವಿಶ್ವನಾಥ ಆಡಳಿತ ಮಂಡಳಿಯ ಅಧ್ಯಕ್ಷ ರಾಜಣ್ಣ ತಿಳಿಸಿದ್ದಾರೆ.
ಅಂದಿನ ತಿಮ್ಮಪ್ಪರಾಜ ಅರಸು ಇಲ್ಲಿನ ಭಕ್ತರು ಕಾಶಿಗೆ ಹೋಗಲು ಸಾಧ್ಯವಿಲ್ಲವೆಂದು ಕಾಶಿಯಿಂದಲೇ ಲಿಂಗವನ್ನ ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿನ್ನೆಲೆ ಕಾಶಿ ವಿಶ್ವನಾಥ ಎಂದು ಕರೆಯಲಾಗುತ್ತದೆ. ರಾಮನಗರ ಜಿಲ್ಲೆಯಲ್ಲಿಯೇ ಈ ದೇವಸ್ಥಾನ ಅತಿ ಹೆಚ್ಚು ಭಕ್ತ ಸಮೂಹ ಹೊಂದಿದೆ. ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನದಂದು ಬಂದು ರಾತ್ರಿ ಜಾಗರಣೆ ಮಾಡಿ, ಬೆಳಗಿನ ಪ್ರಸಾದ ಸ್ವೀಕರಿಸಿ ಹೋಗುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ.