ರಾಮನಗರ: ಸರ್ಕಾರಿ ಸರ್ವರ್ ಹ್ಯಾಕ್ ಮಾಡಿ ಆರ್‌ಟಿಸಿ ಮಾಡಿಸಿ ಅಸಲಿ ದಾಖಲೆ ಎಂಬಂತೆ ಭೂಮಿ ಮಾರಾಟ ಮಾಡುತ್ತಿದ್ದ 7 ಮಂದಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮರಿ ಗೌಡ, ನರಸಿಂಹಮೂರ್ತಿ, ರಾಘವಮೂರ್ತಿ, ಅರುಣ್, ನಂದೀಶ್ ಹಾಗೂ ಶಿವರಾಜು ಬಂಧಿತರು.
ಇವರೆಲ್ಲರೂ ರಿಯಲ್ ಎಸ್ಟೆಟ್ ಏಜೆಂಟ್, ಸೈಬರ್ ಮಾಲೀಕ, ಬ್ರೋಕರ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಹಾರ್ಡ್ವೇರ್ ಎಂಜಿನಿಯರ್ ಆಗಿದ್ದಾರೆ. ಓರ್ವ ಜಮೀನು ಖರೀದಿದಾರ ಸೇರಿದಂತೆ 7 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮತ್ತಷ್ಟು ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ರಾಮನಗರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ಸರ್ಕಾರಿ ಸರ್ವರ್ನಲ್ಲಿರುವ ತಂತ್ರಾಂಶಗಳ ಲೋಪಗಳೇ ಇವರಿಗೆ ವರದಾನವಾಗಿದೆ. ಸರ್ಕಾರಿ ಸರ್ವರ್ ಹ್ಯಾಕ್ ಮಾಡಿ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಮಾಡಲಾಗದ ಕೆಲಸವನ್ನು ಇವರು ಮಾಡಿ ಫಲಾನುಭವಿಗಳಿಗೆ ಆರ್‌ಟಿಸಿ ಕೊಡುತ್ತಿದ್ದರು.
ಸರ್ಕಾರಿ ಸರ್ವರ್ ಹ್ಯಾಕ್ ಮಾಡಿ ಭೂ ದಾಖಲೆಯನ್ನು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುತ್ತಿದ್ದರು. ಈಗಾಗಲೇ ಇವರು 7 ಆರ್‌ಟಿಸಿ ಸೃಷ್ಟಿಸಿ ಆರು ಮಂದಿಗೆ ಭೂಮಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಕನಕಪುರ ತಾಲೂಕಿನ ಬನ್ನಿಕುಪ್ಪೆ, ತುಗಣಿ, ರಾಂಪುರಗಳಲ್ಲಿ 6 ಎಕರೆ ಜಮೀನು ಮಾರಾಟ ಮಾಡಿ ಸರ್ಕಾರಕ್ಕೆ ಸುಮಾರು ಆರು ಕೋಟಿ ರೂ.ಯಷ್ಟು ಹಣ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಬೆಂಗಳೂರಲ್ಲಿ 9 ಬಾಂಗ್ಲಾದೇಶದ ನುಸುಳುಕೋರರು ಅರೆಸ್ಟ್