ರಾಮನಗರ: ಕೃಷಿ ಚಟುವಟಿಕೆಗೆ ರಾಜ್ಯದಲ್ಲಿ ಯಾವುದೇ ತೊಂದರೆಯಾಗಬಾರದು. ಈ ಬಗ್ಗೆ ರಾಜ್ಯದ ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡುತ್ತೇನೆ. ಜಿಲ್ಲೆಯ ರೈತರಿಗೆ ಮುಂಗಾರು ಬಿತ್ತನೆಗೆ ಯಾವುದೇ ತೊಂದರೆಯಿಲ್ಲ. ಬಿತ್ತನೆ ಬೀಜ, ಗೊಬ್ಬರವನ್ನು ಪೂರೈಕೆ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಹೂ ಬೆಳೆಗಾರರು ನಷ್ಟದಲ್ಲಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಧಾರ್ಮಿಕ, ಶುಭ ಕಾರ್ಯಕ್ರಮಗಳು ನಡೆಯದ ಕಾರಣ ಈ ಸಮಸ್ಯೆ ಎದುರಾಗಿದೆ. ರಾಜ್ಯದ ಹೂ ಬೆಳೆಗಾರರ ಸಮೀಕ್ಷೆ ಮಾಡಲಾಗುತ್ತದೆ. ನಂತರ ಅವರಿಗೆ ಸೂಕ್ತ ಪರಿಹಾರ ಕೊಡಲಾಗುತ್ತದೆ ಎಂದರು. ಜೊತೆಗೆ ರೈತರ ಹಣ್ಣು, ತರಕಾರಿ ಖರೀದಿ ಬಗ್ಗೆಯೂ ಚಿಂತಿಸಲಾಗುತ್ತದೆ. ಸಂಬಂಧಪಟ್ಟ ಸಚಿವರ ಗಮನಕ್ಕೆ ಈ ಬಗ್ಗೆ ತಿಳಿಸುತ್ತೇನೆಂದು ಭರವಸೆ ಕೊಟ್ಟರು.
ಮುಖ್ಯವಾಗಿ ಮಂಡ್ಯ -ಮಳವಳ್ಳಿಯಿಂದ ರಾಮನಗರಕ್ಕೆ ಕೊರೊನಾ ಸೋಂಕು ಹರಡುವ ವಿಚಾರಕ್ಕೆ ಮಾತನಾಡಿ, ವಿಳ್ಯದೆಲೆ ವ್ಯಾಪಾರಕ್ಕೆ ಮಂಡ್ಯ ಜಿಲ್ಲೆಯಿಂದ ಚನ್ನಪಟ್ಟಣ ಎಪಿಎಂಸಿ ಮಾರ್ಕೆಟ್ಗೆ ರೈತರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಕೋವಿಡ್ - 19 ಹರಡುವ ಆತಂಕ ವ್ಯಕ್ತವಾಗಿದ್ದು, ಇದನ್ನು ಈಗಲೇ ಸಿಎಂ ಗಮನಕ್ಕೆ ತರುತ್ತೇನೆ.
ಮಂಡ್ಯ - ಮಳವಳ್ಳಿಯಲ್ಲೇ ಮಾರ್ಕೆಟ್ ತೆರೆಯುವ ಬಗ್ಗೆ ಕ್ರಮ ವಹಿಸುತ್ತೇನೆಂದು ಸಭೆಯಲ್ಲಿ ಸಚಿವರು ತಿಳಿಸಿದರು.
ಸಭೆಯಲ್ಲಿ ಎಂಎಲ್ಸಿ ಎಸ್.ರವಿ, ಹೆಚ್.ಎಂ.ರೇವಣ್ಣ, ಸಿ.ಎಂ. ಲಿಂಗಪ್ಪ ಭಾಗಿಯಾಗಿದ್ದರು.