ರಾಮನಗರ: ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರೂ ಇದ್ದೇ ಇರ್ತಾರೆ. ಹಾಗೆ ಮೋಸ ಹೋದವರ ಪಟ್ಟಿಗೆ ಮತ್ತೊಂದು ಗುಂಪು ಸೇರ್ಪಡೆಯಾಗಿದೆ. ಕಡಿಮೆ ಬಡ್ಡಿಗೆ ಸಾಲ ಕೊಡ್ತೀವಿ, ಸಬ್ಸಿಡಿನೂ ಕೊಡ್ತೀವಿ ಅಂತ ಹೇಳಿ ಸಾರ್ವಜನಿಕರ ಬಳಿ ಹಣ ಲಪಟಾಯಿಸಿ ಪರಾರಿಯಾದವನಿಗಾಗಿ ಹಣ ಕಟ್ಟಿದವರು ಹುಡುಕಾಡುವಂತಾಗಿದೆ.
ರಾಜ್ಯದಲ್ಲಿ ಐಎಂಎ ವಂಚನೆ ಪ್ರಕರಣದಂತಹ ದೊಡ್ಡ ಮಟ್ಟದ ವಂಚನೆಗಳು ರಾಮನಗರ ಜಿಲ್ಲೆಯಲ್ಲೂ ಒಂದರ ನಂತರ ಒಂದರಂತೆ ಬೆಳಕಿಗೆ ಬರುತ್ತಿವೆ. ಇದೀಗ ರಾಮನಗರದಲ್ಲಿ ಸಂಘ ಸಂಸ್ಥೆ ಹೆಸರಿನಲ್ಲಿ ವಂಚನೆಗೊಳ್ಳಗಾದವರು ಇದೀಗ ಒಬ್ಬೊಬ್ಬರೇ ನ್ಯಾಯ ಕೊಡಿಸುವಂತೆ ಆಗ್ರಹಿಸಿ, ಹೋರಾಟಗಳನ್ನು ಆರಂಭಿಸಿದ್ದಾರೆ.
ತುಮಕೂರು ಮೂಲದ ಮಂಜುನಾಥ್ ಡಿ. ಎಂಬಾತನೇ ಸಹಕಾರ ಸಂಘಗಳ ಕಾಯ್ದೆಯಡಿ ಲಕ್ಷಾಂತರ ರೂ.ಗಳನ್ನು ಸಾಲ ಕೊಡಿಸಲಾಗುವುದು ಎಂದು ಸುಳ್ಳು ಭರವಸೆ ನೀಡಿ ವಂಚನೆ ಮಾಡಿದ ಖದೀಮನಾಗಿದ್ದಾನೆ. ಈತ ಖ್ಯಾತ ಪತ್ರಿಕೆಯೊಂದರಲ್ಲಿ ಜಾಹೀರಾತು (ಸುದ್ದಿ ರೂಪದಲ್ಲಿ ಪ್ರಕಟಿಸಿದೆ) ನೀಡಿ ಕರ್ನಾಟಕ ಸ್ವ-ಸಹಾಯ ಸಂಘಗಳ ಒಕ್ಕೂಟ ಎಂಬ ಹೆಸರಿನಲ್ಲಿ ಬಡವರಿಗೆ 50 ಪೈಸೆ ಬಡ್ಡಿದರದಲ್ಲಿ ಸಬ್ಸಿಡಿ ಸಾಲ ನೀಡುವುದಾಗಿ ತಿಳಿಸಿದ್ದ. ಅದರಂತೆ ಸಭೆ ಮೇಲೆ ಸಭೆ ನಡೆಸಿ ಎಲ್ಲರಲ್ಲಿ ನಂಬಿಕೆ ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದ್ದ. ಹೀಗೆ ಬರೋಬ್ಬರಿ 17.5 ಲಕ್ಷ ರೂ. ಹಣ ಕಟ್ಟಿಸಿಕೊಂಡು ನಂತರ ಎಲ್ಲರನ್ನೂ ವಂಚಿಸಿದ್ದಾನೆ.
ಹೇಗಾಯ್ತು ವಂಚನೆ?:
ಮಂಜುನಾಥ್ ಸಂಘಗಳ ಮೂಲಕ ಲಕ್ಷಗಟ್ಟಲೇ ಸಾಲ ನೀಡಲಾಗುವುದು, ಇದಕ್ಕೆ ತಲಾ 1,100 ರೂ.ಗಳನ್ನು ಪಾವತಿಸಿ, ಖಾತೆ ತೆರೆಯಬೇಕು ಎಂದು ಮೊದಲು ನಂಬಿಸಿದ್ದ. ಈ ಪೈಕಿ ಒಟ್ಟು 9 ಮಂದಿಯನ್ನ ನಿಯಮಾನುಸಾರ ಪದಾಧಿಕಾರಿಯಾಗಿ ಮಾಡುವುದಾಗಿ ಹೇಳಿದ್ದಲ್ಲದೆ, ಅವರು ಎಲ್ಲರ ಬಳಿ ಹಣ ಸಂಗ್ರಹ ಮಾಡುವಂತೆ ಪ್ರೇರೇಪಿಸಿದ್ದ, ಅದಕ್ಕಾಗಿ ಗುರುತಿನ ಪತ್ರ ಕೂಡ ನೀಡಿದ್ದ. ಬಳಿಕ ಲಕ್ಷಾಂತರ ರೂ. ಠೇವಣಿ ರೂಪದಲ್ಲಿ ಪಡೆದು, ಸಾರ್ವಜನಿಕರಿಂದ ನೇರವಾಗಿ ಕೂಡ ಹಣ ಪಡೆದು ರಾತ್ರೋರಾತ್ರಿ ಜಾಗ ಖಾಲಿ ಮಾಡಿದ್ದಾನೆ.
ತ್ರಿವಿಧ ದಾಸೋಹಿ ಶಿವಕುಮಾರಸ್ವಾಮೀಜಿ, ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಜೊತೆಗೆ ಇರುವ ಫೋಟೋ, ಆನಂದ ಗುರೂಜಿ ಸೇರಿದಂತೆ ಗಣ್ಯ ವ್ಯಕ್ತಿಗಳೊಂದಿಗೆ ಕ್ಲಿಕಿಸಿಕೊಂಡಿದ್ದ ಫೋಟೋ ತೋರಿಸಿ ತನ್ನದು ಏನಿದ್ದರೂ ಪಾರದರ್ಶಕ ವ್ಯವಹಾರ ನಂಬಿಸಿ ಪಂಗನಾಮ ಹಾಕಿದ್ದಾನೆ. ಅಲ್ಲದೆ ಪೊಲೀಸರು ಹಾಗೂ ಮಾಧ್ಯಮಗಳ ಬಳಿ ಹೋದರೆ ಕೋರ್ಟ್ಗೆ ಹಣ ಡೆಪಾಸಿಟ್ ಮಾಡುವ ಬೆದರಿಕೆ ಹಾಕಿ ನನಗೆ ಎಂಪಿ, ಎಂಎಲ್ಎ ಗೊತ್ತು ಅಂತಾ ಬೆದರಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಸಾಲ ನೀಡುವ ನಂಬಿಕೆಗಾಗಿ ಕೆಲವರ ಹೆಸರಲ್ಲಿ ಲಕ್ಷಾಂತರ ರೂಪಾಯಿ ನಕಲಿ ಚೆಕ್ ನೀಡಿದ್ದ. ಅಲ್ಲದೆ ಬೆಂಗಳೂರಿನ ಅಶೋಕನಗರದ ಕೆನರಾ ಬ್ಯಾಂಕ್ನಲ್ಲಿ ಕೋಟ್ಯಂತರ ಹಣ ಇಟ್ಟಿರೋದಾಗಿ ಬ್ಯಾಂಕ್ ಸೀಲ್ ಬಳಸಿ ಚಲನ್ ಕೂಡ ವಾಟ್ಸ್ಆ್ಯಪ್ ನಲ್ಲಿ ಕಳುಹಿಸಿ ಸಾಲದ ಮೊತ್ತ ರೆಡಿಯಾಗಿದೆ. ಐಟಿ ರಿಟರ್ನ್ಸ್ ಮಾಡಿಸುವಂತೆ ಹೇಳಿದ್ದ, ಇದೆಲ್ಲದರ ಜೊತೆಗೆ ಪದಾಧಿಕಾರಿಗಳಾಗಬೇಕಿದ್ದ 9 ಮಂದಿಯಿಂದ ತಲಾ 25 ಸಾವಿರ ಬ್ಯಾಂಕಿಗೆ ಡೆಪಾಸಿಟ್ ಮಾಡಿಕೊಂಡಿದ್ದ. ಹೀಗೆ ವಿಜಯಾ ಬ್ಯಾಂಕ್ (a/c 116101011008878) ಹಾಗೂ ಕೆನರಾ ಬ್ಯಾಂಕ್ (a/c 0445201001079) ಖಾತೆಗಳಿಗೆ ಹಣ ಕಟ್ಟಿರುವ ರಸೀದಿಗಳನ್ನು ಪ್ರದರ್ಶಿಸಿ ಜನರು ತಮ್ಮ ಗೋಳು ತೋಡಿಕೊಳ್ಳುತ್ತಾರೆ. ಅಲ್ಲದೆ ಈ ಪ್ರಕರಣದಿಂದ ಅದೆಷ್ಟೋ ಮಂದಿ ಅಮಾಯಕರನ್ನು ಯಾಮಾರಿಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.