ರಾಮನಗರ: ಹಾರೋಹಳ್ಳಿಯಲ್ಲಿ ಕಾಮಗಾರಿಯೊಂದಕ್ಕೆ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾಗ ತೋಕಸಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ತೋಕಸಂದ್ರ ಗ್ರಾ.ಪಂಚಾಯಿತಿಯ ವ್ಯಾಪ್ತಿಯಲ್ಲಿ ಅಂದಾಜು 7 ಲಕ್ಷ ರೂ ವೆಚ್ಚದಲ್ಲಿ ಕೈಗೊಂಡಿದ್ದ ಚೆಕ್ ಡ್ಯಾಮ್ ಕಾಮಗಾರಿಗೆ ಶೇ.10ರಷ್ಟು ಕಮಿಷನ್ ನೀಡುವಂತೆ ಪಿಡಿಒ ರಮ್ಯಾ ಬೇಡಿಕೆ ಇಟ್ಟಿದ್ದಾರೆ ಎಂದು ಎಸಿಬಿ ಅಧಿಕಾರಿಗಳಿಗೆ ಗುತ್ತಿಗೆದಾರ ದೂರು ನೀಡಿದ್ದರು.
ದೂರಿನನ್ವಯ ಡಿವೈಎಸ್ಪಿ ಮಲ್ಲೆಶ್ ನೇತೃತ್ವದ 7 ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ. ಈ ವೇಳೆ ದೂರುದಾರ ಕಾಮಗಾರಿಗೆ ಸಂಬಂಧಪಟ್ಟಂತೆ 57,000 ಕಮಿಷನ್ ಹಣವನ್ನು ಪಡೆಯುತ್ತಿದ್ದಾಗ ರಮ್ಯಾ ಎಸಿಬಿ ಬಲೆಗೆ ಬಿದ್ದರು. ಅಧಿಕಾರಿಯನ್ನು ಬಂಧಿಸಿದ ಎಸಿಬಿ ತನಿಖೆ ಮುಂದುವರಿಸಿದೆ.