ರಾಮನಗರ: ಜಾನುವಾರು ಸಾಗಣೆ ವೇಳೆ ಕ್ಯಾಂಟರ್ ಡ್ರೈವರ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುನೀತ್ ಕೆರೆಹಳ್ಳಿ ಸೇರಿ ಐವರನ್ನು ಸಾತನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. 'ರಾಜಸ್ಥಾನದ ಗಡಿ ಜಿಲ್ಲೆಯಾದ ಬನಸ್ವಾರದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ' ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಮಾರ್ಚ್ 31 ರಂದು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಬಳಿ ಅಕ್ರಮ ಜಾನುವಾರು ಸಾಗಾಣಿಕೆ ನಡೆಯುತ್ತಿತ್ತು. ಈ ವೇಳೆ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರು ಕ್ಯಾಂಟರ್ ತಡೆದು ಜಾನುವಾರು ರಕ್ಷಣೆ ಮಾಡಿದ್ದರು. ನಂತರ ಕ್ಯಾಂಟರ್ ಡ್ರೈವರ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಮೃತನನ್ನು ಮಂಡ್ಯ ಮೂಲದ ಇದ್ರಿಷ್ ಪಾಷಾ ಎಂದು ಗುರುತಿಸಲಾಗಿತ್ತು. ಇದೊಂದು ಕೊಲೆ ಎಂದು ಇದ್ರೀಸ್ ಪಾಷ ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದರು. ಅಲ್ಲದೆ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಆರೋಪಿಗಳ ಬಂಧನ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಕಾರ್ತಿಕ್ ರೆಡ್ಡಿ, ಮಾರ್ಚ್ 31ರಂದು ಈ ಪ್ರಕರಣ ನಡೆದಿತ್ತು. ಪ್ರಕರಣ ಸಂಬಂಧ ಮೂರು ಎಫ್ಐಆರ್ ದಾಖಲಾಗಿದೆ. ಪುನೀತ್ ಕೆರೆಹಳ್ಳಿ ಹಾಗೂ ನಾಲ್ಕು ಸಹಚರರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು. ರಾಜಸ್ಥಾನದ ಗಡಿ ಜಿಲ್ಲೆ ಬನಸ್ವಾರದಲ್ಲಿ ಐವರನ್ನು ಬಂಧಿಸಲಾಗಿದೆ. ಗುಜರಾತ್ ಹಾಗೂ ರಾಜಸ್ಥಾನ ಪೊಲೀಸರ ಸಹಾಯದೊಂದಿಗೆ ಬಂಧನ ಮಾಡಲಾಗಿದೆ. ಪುನೀತ್ ಕೆರೆಹಳ್ಳಿ (A1 ಆರೋಪಿ), ಗೋಪಿ (A2), ಪವನ್ ಕುಮಾರ್ (A3), ಪಿಲ್ಲಿಂಗ್ ಅಂಬಿಗಾರ್ (A4), ಸುರೇಶ್ ಕುಮಾರ್ (A5) ಬಂಧಿತ ಆರೋಪಿಗಳು ಎಂದು ಮಾಹಿತಿ ನೀಡಿದರು.
ಇಂದು ಮಧ್ಯಾಹ್ನದ ವೇಳೆಗೆ ಬಂಧನ ಮಾಡಲಾಗಿದೆ. ನಾಳೆ ರಾಜಸ್ಥಾನ ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳನ್ನು ರಾಮನಗರಕ್ಕೆ ಕರೆತರುತ್ತೇವೆ. ಪುನೀತ್ ಕೆರೆಹಳ್ಳಿ ವಿರುದ್ಧ ಈಗಾಗಲೇ 11ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಎಲ್ಲಾ ಪ್ರಕರಣಗಳ ಕುರಿತು ತನಿಖೆ ನಡೆಸಲಾಗುವುದು. ಆರೋಪಿಗಳು ಕಳೆದ 5 ದಿನಗಳಿಂದ ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದರು. ಮೊಬೈಲ್ ಲೊಕೇಷನ್ ಆಧರಿಸಿ ಅವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದರು.
ಪ್ರಕರಣ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಐಪಿಸಿ ಸೆಕ್ಷನ್ 341, 504, 506, 324, 302, 34ರ ಅಡಿ ಕೇಸ್ ದಾಖಲಾಗಿತ್ತು. ಆರೋಪಿಗಳ ಸೆರೆಗಾಗಿಯೇ ಐವರು ಪೊಲೀಸ್ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿತ್ತು.
ಇದನ್ನೂ ಓದಿ:ಕ್ಯಾಂಟರ್ ಡ್ರೈವರ್ ಸಾವು ಪ್ರಕರಣ: ಯಾವುದೇ ರಾಜಕೀಯ ಒತ್ತಡ ಇಲ್ಲ: ಎಸ್ಪಿ ಕಾರ್ತಿಕ್ ರೆಡ್ಡಿ