ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ನೀಡಲು ಪೊಲೀಸ್ ಠಾಣೆಗೆ ಕುಡಿದ ಮತ್ತಿನಲ್ಲಿ ಬಂದಿದ್ದ ವ್ಯಕ್ತಿಯೋರ್ವ ಪೊಲೀಸರ ಮೇಲೆ ಹಲ್ಲೆ ನಡೆಸಿ ಜೈಲುಪಾಲಾಗಿರುವ ಘಟನೆ ನಗರದಲ್ಲಿ ನಡೆದಿದೆ.
ತಾಲೂಕಿನ ವಿಭೂತಿಕೆರೆ ನಿವಾಸಿ ರಾಮು (35) ಎಂಬಾತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲು ಕಂಠಪೂರ್ತಿ ಮದ್ಯ ಸೇವಿಸಿ ಬಂದಿದ್ದ. ಈ ವೇಳೆ ಗ್ರಾಮಾಂತರ ಠಾಣೆಯ ಸೆಂಟ್ರಿ ಪ್ರವೀಣ್ ಸ್ವಲ್ಪ ಹೊತ್ತು ಕಾಯವಂತೆ ತಿಳಿಸಿದ್ದಾರೆ. ಆದರೆ ಇಷ್ಟಕ್ಕೇ ಕೋಪಗೊಂಡ ರಾಮು ಗಲಾಟೆ ಮಾಡಿದ್ದಲ್ಲದೆ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.
ಆಗ ಉಳಿದ ಪೊಲೀಸ್ ಸಿಬ್ಬಂದಿ ಇದು ಠಾಣೆ, ಇಲ್ಲಿ ಶಾಂತತೆ ಕಾಪಾಡಬೇಕು ಎಂದಿದ್ದಾರೆ. ಮತ್ತೆ ರೊಚ್ಚಿಗೆದ್ದ ಆರೋಪಿ ರಾಮು ಪೇದೆಯ ಮುಖಕ್ಕೆ ಹೊಡೆದಿದ್ದಾನೆ. ಪರಿಣಾಮ ಪೇದೆಯ ತುಟಿ, ಕೆನ್ನೆಗೆ ಗಾಯಗಳಾಗಿವೆ. ಈ ಸಂಬಂಧ ಮುಖ್ಯ ಪೇದೆ ಮುತ್ತುರಾಜು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.