ರಾಮನಗರ: ಮಹಾಶಯನೊಬ್ಬ ಸ್ನೇಹಿತನಿಗಾಗಿ ತಾನು ಪ್ರೀತಿಸಿದ ಯುವತಿಯನ್ನೇ ಬಿಟ್ಟುಕೊಟ್ಟು ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಾಮನಗರದ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ಅಂತಿಮ ವರ್ಷದ ಬಿ.ಕಾಂ. ಓದಲು ನಗರದ ಕಾಲೇಜೊಂದಕ್ಕೆ ಬರುತ್ತಿದ್ದ ಗ್ರಾಮೀಣ ಪ್ರದೇಶದ ಯುವತಿಯನ್ನು ಮಂಜು (21) ಎಂಬಾತ ಪ್ರೀತಿಸುತ್ತಿದ್ದ. ಯುವತಿಯು ಪರೀಕ್ಷೆ ಬರೆಯುತ್ತಿರುವುದನ್ನು ತಪ್ಪಿಸಿ, ಅರ್ಧಕ್ಕೆ ಎಬ್ಬಿಸಿ ಕರೆದುಕೊಂಡು ಬಂದ ಯುವಕ ತನ್ನ ಸ್ನೇಹಿತ ರವಿ (33) ಎಂಬಾತನ ಜೊತೆ ಮದುವೆ ಮಾಡಿಸಿದ್ದ.
ರವಿಗೆ ಎರಡನೇ ಮದುವೆ: ರವಿಯು ನಾಲ್ಕು ವರ್ಷಗಳ ಹಿಂದೆಯೇ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಕಾರಣಾಂತರಗಳಿಂದ ಮದುವೆಯಾಗಿದ್ದ ಯುವತಿ ಈತನನ್ನು ಬಿಟ್ಟು ಹೋಗಿದ್ದಳು. ಇದರಿಂದ ಮತ್ತೆ ಮದುವೆಯಾಗಲು ಇಚ್ಛಿಸಿದ ರವಿ ತನ್ನ ಆತ್ಮೀಯ ಸ್ನೇಹಿತ ಮಂಜು ಬಳಿ ಆತನ ಪ್ರೇಯಸಿಯನ್ನು ಬಿಟ್ಟು ಕೊಡುವಂತೆ ಕೇಳಿದ್ದಾನೆ. ನೀನು ಚೆನ್ನಾಗಿದ್ದೀಯಾ.. ನಿನಗೆ ಬೇರೆ ಹುಡುಗಿ ಸಿಗುತ್ತಾಳೆ. ನನಗೆ ಯಾರು ಸಿಗುತ್ತಾರೆ? ಎಂದು ಪುಸಲಾಯಿಸಿದ್ದನಂತೆ. ಇದರಿಂದ ಸ್ನೇಹಿತನ ಮಾತಿಗೆ ಮನ್ನಣೆ ನೀಡಿದ ಮಂಜು ತನ್ನ ಪ್ರೇಯಸಿಯನ್ನೇ ರವಿಗೆ ನೀಡಲು ಒಪ್ಪಿದ್ದ.
ಬೆದರಿಸಿ ಮದುವೆ ಮಾಡಿಸಿದ ಪ್ರಿಯಕರ: ಅದರಂತೆ, ತಾನು ಪ್ರೀತಿಸುತ್ತಿದ್ದ 19 ವರ್ಷದ ಯುವತಿಯನ್ನು ರವಿ ಬಳಿ ಸ್ಕೂಟರ್‌ನಲ್ಲಿ ಮಂಜು ಮದುವೆ ಮಾಡಿಸಲು ಕರೆದುಕೊಂಡು ಬಂದಿದ್ದಾನೆ. ರವಿ ಕೈಯಿಂದ ಯುವತಿಗೆ ದಾರವೊಂದನ್ನು ಕಟ್ಟಿಸಿದ ಮಂಜು, ನಿಮ್ಮಿಬ್ಬರ ಮದುವೆ ಆಗಿದೆ. ನೀನು ಅವನು ಹೇಳಿದಂತೆ ಕೇಳಬೇಕು ಎಂದು ಯುವತಿಗೆ ತಾಕೀತು ಮಾಡಿದ್ದಾನೆ. ಅಲ್ಲದೆ, ಯುವತಿಯೊಂದಿಗೆ ಸುತ್ತಾಡಿದ ಕ್ಷಣಗಳ ಫೋಟೋ ತೆಗೆದುಕೊಂಡಿದ್ದ ಮಂಜು, ಮದುವೆ ಒಪ್ಪದಿದ್ದರೆ ಎಲ್ಲಾ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಬಳಿಕ ರವಿ ಯುವತಿಯನ್ನು ರಾತ್ರೋರಾತ್ರಿ ಚಾಮರಾಜನಗರದ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಯುವತಿ ಜೊತೆ ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ, ಮನೆಗೆ ಸೇರಿಸಿಕೊಳ್ಳದ ಸಂಬಂಧಿಕರು ಬೆಳಗ್ಗೆ ಬರುವಂತೆ ಹೇಳಿ ಕಳುಹಿಸಿದ್ದರು. ಬಳಿಕ, ಅಲ್ಲಿಂದ ಶಿರಾದಲ್ಲಿ ತಾನು ಕೆಲಸ ಮಾಡುತ್ತಿದ್ದ ಮಾಲೀಕನ ಬಳಿ ಹೋಗಿ, ಅವರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಈತ ಆಶ್ರಯ ಪಡೆದಿದ್ದ.
ಸ್ನೇಹಿತರಿಬ್ಬರೂ ಜೈಲುಪಾಲು: ಇತ್ತ ತಮ್ಮ ಮಗಳು ಕಾಣೆಯಾಗುತ್ತಿದ್ದಂತೆ ಆತಂಕಗೊಂಡ ಯುವತಿಯ ಪೋಷಕರು ಐಜೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಯುವತಿಯನ್ನು ಶಿರಾ ಬಳಿ ಇರಿಸಿರುವ ಮಾಹಿತಿ ರವಿ ಮೊಬೈಲ್ ಲೋಕೇಷನ್ ಆಧಾರದ ಮೇಲೆ ಗೊತ್ತಾಗಿತ್ತು. ತಕ್ಷಣ ಆರೋಪಿಯನ್ನು ಬಂಧಿಸಿ, ಯುವತಿಯನ್ನು ಕರೆತಂದು ವಿಚಾರಣೆ ನಡೆಸಿದಾಗ ಎಲ್ಲ ವಿಚಾರ ಬಯಲಾಗಿದೆ.
ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಪ್ರೇಯಸಿಯ ಬಿಟ್ಟುಕೊಟ್ಟು ಮದುವೆ ಮಾಡಿಸಿದ ವಿಚಾರ ಬಾಯ್ಬಿಟ್ಟಿದ್ದಾರೆ. ಸದ್ಯ ಯುವತಿಯನ್ನು ಪೋಷಕರ ವಶಕ್ಕೆ ಒಪ್ಪಿಸಿರುವ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್ಪಿ ಪ್ರತಿಕ್ರಿಯೆ: ಈ ಬಗ್ಗೆ ಮಾಹಿತಿ ನೀಡಿರುವ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ, ''ಐಜೂರು ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಯುವತಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ, ಮೊದಲು ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ತದನಂತರ ವಿಚಾರಣೆ ನಡೆಸಿದಾಗ, ಯುವಕನು ಆತನ ಸ್ನೇಹಿತನಿಗೆ ತಾನು ಪ್ರೀತಿಸುತ್ತಿದ್ದ ಯುವತಿಯನ್ನೇ ಕಳಿಸಿಕೊಟ್ಟ ಬಗ್ಗೆ ಗೊತ್ತಾಗಿದೆ. ನಂತರ ಮಂಜು ಹಾಗೂ ರವಿ ಇಬ್ಬರನ್ನೂ ಕರೆತಂದು ವಿಚಾರಣೆ ನಡೆಸಿದಾಗ ಯುವತಿಯನ್ನು ರವಿ ಮದುವೆ ಆಗಿರುವುದಾಗಿ ಹೇಳಿದ್ದಾರೆ. ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರು: ತಾಳಿ ಕಟ್ಟಿಸಿಕೊಳ್ಳುವ ಶುಭ ವೇಳೆ ಉಲ್ಟಾ ಹೊಡೆದ ವಧು.. ಮುರಿದು ಬಿದ್ದ ಮದುವೆ