ರಾಮನಗರ : ನರೇಂದ್ರ ಮೋದಿ ನಾಯಕತ್ವದಲ್ಲಿ ಮೊದಲ ಬಾರಿಗೆ ಸ್ಥಿರ ಸರ್ಕಾರ ಕಂಡಿರುವ ಭಾರತ ಪ್ರಗತಿ ಸಾಧಿಸುವಲ್ಲಿ ಮುಂಚೂಣಿಯಲ್ಲಿದೆ. ಹಿಂದೆಂದೂ ಕಂಡರಿಯದ ಸಾಧನೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಮಾಡಿ ತೋರಿಸಿವೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಸಂತಸ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, 2ನೇ ಬಾರಿಗೆ ಸರ್ಕಾರ ಅಧಿಕಾರಕ್ಕೆ ಬಂದು ಮೊದಲ ವರ್ಷ ಪೂರೈಸಿದೆ. ಕಳೆದ 30 ವರ್ಷದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾತ್ರ ಸ್ಥಿರ ಸರ್ಕಾರ ಇದೆ. ಮೊದಲ ಬಾರಿ ಡಿಮಾನಿಟೈಸೇಷನ್, ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ ಸೇರಿ ಹಲವು ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಾತಂತ್ರ್ಯ ಬಂದು ಅರವತ್ತು ವರ್ಷ ಕಳೆದರೂ ಕೋಟ್ಯಂತರ ಜನಕ್ಕೆ ಬ್ಯಾಂಕ್ ಖಾತೆಗಳೇ ಇರಲಿಲ್ಲ. ಇದೀಗ ಕೋಟ್ಯಂತರ ಖಾತೆ ತೆರೆಯಲಾಗಿದೆ ಎಂದರು.
ಒಂದು ವರ್ಷದ ಅವಧಿಯಲ್ಲಿ 60 ವರ್ಷದಲ್ಲಿ ಮಾಡಲಾಗದ ಕೆಲಸ ಮಾಡಿ ತೋರಿಸಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಸರ್ಜಿಕಲ್ ಸ್ಟ್ರೈಕ್, ಒನ್ ಇಂಡಿಯಾ, ಒನ್ ನೇಷನ್-ಒನ್ ಕಾರ್ಡ್ ಅಲ್ಲದೇ ಜಮ್ಮು-ಕಾಶ್ಮೀರದ ದೊಡ್ಡ ತಲೆನೋವಾಗಿದ್ದ 370 ಆ್ಯಕ್ಟ್ ರದ್ಧತಿ ಮಾಡಿ ಸಂಪೂರ್ಣ ಉತ್ತರ ನೀಡಿದ್ದಾರೆ ಎಂದರು.
ರಾಮಮಂದಿರ ಕೇವಲ ನೆಪ ಮಾತ್ರ ಎಂದು ಹೇಳಲಾಗಿತ್ತು. ನ್ಯಾಯಾಲಯದ ತೀರ್ಪು ಮುಖಾಂತರ ಹೋರಾಟಕ್ಕೆ ಜಯ ಸಿಕ್ಕಿದ್ದು ಕೆಲವೇ ವರ್ಷದಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾನೂನು, ಮಕ್ಕಳ ದೌರ್ಜನ್ಯ ತಡೆ, ಮಹಿಳಾ ಅಪರಾಧ ಕೃತ್ಯಕ್ಕೂ ಮರಣದಂಡನೆ ಇಂತಹ ಹಲವು ಸುಧಾರಣೆ ತರಲಾಗಿದೆ. ಕೋವಿಡ್- 19ಗೆ ಪ್ರಪಂಚವೇ ತತ್ತರಿಸಿ ಹೋಗಿದೆ. ಆದರೆ, ಭಾರತ ಸೂಕ್ತಕಾಲದಲ್ಲಿ ಸೂಕ್ತ ನಿರ್ಣಯ ತೆಗೆದುಕೊಂಡು ವ್ಯವಸ್ಥಿತವಾಗಿ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಭ್ರಷ್ಟಾಚಾರ ಮುಕ್ತ ಸರ್ಕಾರ : ಯಾವುದೇ ಸಚಿವ ಅಥವಾ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಇಲ್ಲದೆ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಸ್ವದೇಶಿ ಚಿಂತನೆಯ ಯೋಜನೆ ಜಾರಿಗೆ ತರಲಾಗಿದೆ. ಸ್ಥಗಿತಗೊಂಡಿದ್ದ ಉದ್ಯಮಗಳಿಗೆ ಆರ್ಥಿಕ ಶಕ್ತಿ ತುಂಬುವ ಸಲುವಾಗಿ ಸರ್ಕಾರವೇ ಭದ್ರತೆಕೊಟ್ಟು ಆದ್ಯತೆ ನೀಡುತ್ತಿದೆ. ಅಲ್ಲದೆ ಜಿಡಿಪಿ ವಿಚಾರದಲ್ಲಿ ದೇಶದ ಜನರಿಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ. ಹೀಗಿರುವ ಜಿಡಿಪಿ ಹೆಚ್ಚಳಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಕರಾಳವಾಗಿ ಬದುಕಿದ್ದಾರೆ ಡಿ ಕೆ ಬ್ರದರ್ಸ್ : ಡಿ ಕೆ ಬ್ರದರ್ಸ್ ಕರಾಳವಾಗಿ ಬದುಕಿದ್ದಾರೆ ಮತ್ತು ಕರಾಳವಾಗಿ ಬದುಕಿರುವ ಪಕ್ಷ ಅದು ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸ್ವಾರ್ಥಕ್ಕಾಗಿ ರಾಜಕಾರಣ ಮಾಡೋರ ಬಗ್ಗೆ ಮಾತಾಡೋಲ್ಲಾ, ಡಿ ಕೆ ಬ್ರದರ್ಸ್ ಬಗ್ಗೆ ಹೆದರಿ ಜಿಲ್ಲೆಗೆ ಬರುತ್ತೀದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೆದರೋ ಪ್ರಶ್ನೇನೇ ಇಲ್ಲ. ನಾನು ಜನರ ಸೇವೆಗೆ ಬಂದವನು, ಸರ್ಕಾರದ ಸೇವಕ ನಾನು, ಅವರು ದೊಡ್ಡವರು ದೊಡ್ಡ ದೊಡ್ಡದಾಗಿ ಕಾಣ್ತಾರೆ. ನಾನು ಅವರಿಗೆ ಕಾಣೋದೆ ಬೇಡ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಲೇವಡಿ ಮಾಡಿದರು.