ರಾಮನಗರ: ಕೊರೊನಾ ಸೋಂಕಿತರೆಂದರೆ ಸಮಾಜ ಮೂಗು ಮುರಿಯುತ್ತಿರುವ ಸಂದರ್ಭದಲ್ಲಿ ಅವರನ್ನು ನೇರವಾಗಿ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬುವ ಮೂಲಕ ಸಂಸದ ಡಿ.ಕೆ. ಸುರೇಶ್ ಮಾನವೀಯತೆ ಮೆರೆಯುವುದರ ಜತೆಗೆ ರಾಜಕಾರಣಿಗಳಿಗೂ ಆದರ್ಶವಾಗಿದ್ದಾರೆ.
ಜಿಲ್ಲಾ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ ಸುರೇಶ್ ಅವರು, ಅಲ್ಲಿನ ಸೋಂಕಿತರು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಹೆದರಬೇಡಿ ನಾನಿದ್ದೇನೆ ಎಂದು ಧೈರ್ಯ ಹೇಳಿ ಆತ್ಮವಿಶ್ವಾಸ ತುಂಬಿದರು.
ತಾವೇ ಪಿಪಿಇ ಕಿಟ್ ಧರಿಸಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ 131 ಸೋಂಕಿತರ ಸಮಸ್ಯೆ, ಪರಿಸ್ಥಿತಿ ಹಾಗೂ ಆರೋಗ್ಯ ವಿಚಾರಿಸಿದರು. ಆ ಮೂಲಕ ಸೋಂಕಿತರನ್ನು ನೇರವಾಗಿ ಸಂಪರ್ಕಿಸಿ, ಅವರ ಕುಂದುಕೊರತೆ ಆಲಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ.
ಕೊರೊನಾ ಸೋಂಕಿತರನ್ನು ಸಮಾಜದಲ್ಲಿ ತಿರಸ್ಕಾರ ಹಾಗೂ ಆತಂಕದಿಂದ ನೋಡುವ ಈ ಸಂದರ್ಭದಲ್ಲಿ ಸಂಸದರ ಈ ನಡೆ ಸಮಾಜಕ್ಕೂ ಒಂದು ಸಂದೇಶ ರವಾನಿಸಿದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಸೋಂಕು ತಗುಲಿದೆ. ಯಾರೂ ಇದು ಬರಲಿ ಎಂದು ಬಯಸುವುದಿಲ್ಲ. ಬಂದಾಗ ಧೈರ್ಯದಿಂದ ಎದುರಿಸದೇ ವಿಧಿಯಿಲ್ಲ. ಆದರೆ ಎಲ್ಲರೂ ಒಟ್ಟಾಗಿ ಇದನ್ನು ಎದುರಿಸಬೇಕೆ ಹೊರತು ಅವರನ್ನು ಉಪೇಕ್ಷೆ ಮಾಡುವುದು ಸರಿಯಲ್ಲ ಎಂಬ ಸಂದೇಶವನ್ನು ಸುರೇಶ್ ರವಾನಿಸಿದ್ದಾರೆ.
ಇದೇ ವೇಳೆ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಜೊತೆಗೂ ಮಾತುಕತೆ ನಡೆಸಿದ ಸುರೇಶ್ ಅವರು, ಅವರ ಸೇವೆಯನ್ನು ಶ್ಲಾಘಿಸುವುದರ ಜೊತೆಗೆ ಅವರಿಗೂ ಆತ್ಮ ವಿಶ್ವಾಸ ತುಂಬಿದರು.