ರಾಮನಗರ: ನಕಲಿ ಎಟಿಎಂ ಕಾರ್ಡ್ ಬಳಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಇಬ್ಬರು ವಿದೇಶಿಗರನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.
ತಾಂಜೇನಿಯಾ ಮೂಲದ ವಿದ್ಯಾರ್ಥಿ ವೀಸಾ ಪಡೆದಿರುವ ಅಲೆಕ್ಸ್ ಮಾಂಡೆರ್ಡ್ ಮಿಸ್ಕೆ (20) ಹಾಗೂ ಜಾರ್ಜ್ ಜೀನಿಯಸ್ ಅಸ್ಸೆ (20) ಎಂಬುವರೆ ಬಂಧಿತ ಆರೋಪಿಗಳು. ವಿದ್ಯಾಭ್ಯಾಸ ಮಾಡುವ ನೆಪದಲ್ಲಿ ಮೋಜು ಮಸ್ತಿಗಾಗಿ ಕಳ್ಳತನ ಕೃತ್ಯಕ್ಕಿಳಿದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಏನಿದು ಪ್ರಕರಣ: ಕುದೂರು ಸಮೀಪದ ಗೊಲ್ಲಹಳ್ಳಿ ಗ್ರಾಮದ ವಾಸಿ ಶಿವಕುಮಾರ್ ಎಂಬುವರು ಕುದೂರು ಕೆನರಾ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಎಟಿಎಂ ತಮ್ಮ ಬಳಿಯೇ ಇದ್ದರೂ ಸಹ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಪೊಲೀಸರು ಇಬ್ಬರು ವಿದೇಶಿ ಖದೀಮರನ್ನು ಬಂಧಿಸಿದ್ದಾರೆ. ಆರೋಪಿಗಳು ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಬ್ಯಾಂಕ್ ಖಾತೆದಾರರ ಎಟಿಎಂ ಮಾಹಿತಿ ಕದ್ದು ನಕಲಿ ಎಟಿಎಂ ಕಾರ್ಡ್ ಸೃಷ್ಟಿಸಿ ಹಣ ದೋಚುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಬಂಧಿತರಿಂದ 01 ಕಾರು, 2 ದ್ವಿಚಕ್ರವಾಹನ, 01 ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು, ನಕಲು ಎಟಿಎಂ ಕಾರ್ಡ್‌ಗಳು ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.