ರಾಮನಗರ: ಖಾಸಗಿ ಶಾಲೆಗಳ ಶುಲ್ಕ ಪಾವತಿ ವಿಚಾರ ಸಂಬಂಧಿಸಿದಂತೆ ಸಚಿವ ಸುರೇಶ ಕುಮಾರ ವಿರುದ್ದ ಎಂಎಲ್ಸಿ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುಟ್ಟಣ್ಣ ಮಾತನಾಡಿದರು.
ಶಿಕ್ಷಣ ಸಚಿವರು ಈ ಸರ್ಕಾರದಲ್ಲಿ ನಿಷ್ಕ್ರಿಯರಾಗಿದ್ದಾರೆ. ಸಿಎಂ ಯಡಿಯೂರಪ್ಪನವರ ಮಾತಿಗೂ ಅವರು ಬೆಲೆ ಕೊಡುತ್ತಿಲ್ಲ. ಖಾಸಗಿ ಶಾಲಾ ಶಿಕ್ಷಕರು ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದಾರೆ. ಅವರ ಪರವಾಗಿ ಶಿಕ್ಷಣ ಸಚಿವರು ಯಾವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಹತ್ತಾರು ಸಭೆಗಳನ್ನ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಶಿಕ್ಷಣ ಸಚಿವರು ಯಾರ ಮಾತಿಗೂ ಬೆಲೆ ಕೊಡುತ್ತಿಲ್ಲ. ನಾನು ಯಾವತ್ತಿಗೂ ಶಿಕ್ಷಕರ ಪರವಾಗಿ ಇರುತ್ತೇನೆ. ಬಿಜೆಪಿ ಸೇರುವಾಗಲೇ ಈ ಬಗ್ಗೆ ಸಿಎಂ ಯಡಿಯೂರಪ್ಪನವರಿಗೆ ತಿಳಿಸಿದ್ದೇನೆ. ಇದೇ 23ರಂದು ಸುರೇಶ ಕುಮಾರ ವಿರುದ್ಧ ಬೃಹತ್ ಹೋರಾಟ ನಡೆಯಲಿದೆ. 20 ಸಾವಿರಕ್ಕೂ ಹೆಚ್ಚು ಜನ ಶಿಕ್ಷಕರು, ಮ್ಯಾನೇಜಮೆಂಟ್ನವರು ಸೇರಲಿದ್ದಾರೆ ಎಂದರು.
ನಮಗೆ ಈಗ ಹೋರಾಟದ ಅನಿವಾರ್ಯತೆ ಇದೆ. ಸಮಸ್ಯೆ ಬಗೆಹರಿಯದಿದ್ದರೆ ಮುಂದೆ ಉಗ್ರ ಹೋರಾಟ ರೂಪಿಸಲಾಗುತ್ತೆ ಎಂದು ಚನ್ನಪಟ್ಟಣದಲ್ಲಿ ಎಂಎಲ್ಸಿ ಪುಟ್ಟಣ್ಣ ವಾಗ್ದಾಳಿ ನಡೆಸಿದ್ದಾರೆ.