ರಾಮನಗರ: ತೆಂಗಿನ ಫಸಲು ನಾಶ ಮಾಡುತ್ತವೆ ಎಂಬ ಕಾರಣಕ್ಕೆ ಏಳು ಕೋತಿಗಳನ್ನು ಕೊಂದು ಚೀಲದಲ್ಲಿ ಕಟ್ಟಿ ಬಿಸಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಯಲಚವಾಡಿ ಬಳಿಯ ವಾಸ ಪಟ್ಟಣದಲ್ಲಿ ನಡೆದಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಯಲಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಸ ಪಟ್ಟಣದಲ್ಲಿ ಇತಂದೊಂದು ಕೃತ್ಯ ಬಯಲಿಗೆ ಬಂದಿದೆ. ರಸ್ತೆ ಬದಿ ಅನುಮಾನಾಸ್ಪದವಾಗಿ ಬಿದ್ದಿದ್ದ ಚೀಲವನ್ನು ತೆಗೆದು ನೋಡಿದಾಗ ಏಳು ಕೋತಿಗಳನ್ನು ಕೊಂದು ಚೀಲದಲ್ಲಿ ಕಟ್ಟಿ ಬಿಸಾಡಿರುವುದು ಗೊತ್ತಾಗಿದೆ.
ಕೋತಿಗಳು ಸಾಮಾನ್ಯವಾಗಿ ತೆಂಗಿನ ಮರದಿಂದ ಎಳನೀರು ಕೀಳುವುದು, ಸೀಬೆಕಾಯಿ, ಕಡಲೆಕಾಯಿ ಇತ್ಯಾದಿ ಕೃಷಿ ಬೆಳೆಗಳ ಮೇಲೂ ದಾಳಿ ಮಾಡುತ್ತವೆ. ಇದೇ ಕಾರಣಕ್ಕೆ ಕೋತಿಗಳ ಉಪಟಳದಿಂದ ಬೇಸತ್ತ ಕಿಡಿಗೇಡಿಗಳು ಕೋತಿಗಳನ್ನು ಸಾಯಿಸಿ, ಗೋಣಿ ಚೀಲದಲ್ಲಿ ಮೂಟೆ ಕಟ್ಟಿ ರಸ್ತೆ ಬದಿ ತಂದು ಹಾಕಿದ್ದಾರೆ. ಒಂದು ಕೋತಿ ಮರಿ ಸೇರಿ ಒಟ್ಟು ಏಳು ಕೋತಿಗಳು ಸಾವನ್ನಪ್ಪಿದ್ದು, ಕೋತಿಯ ಕುತ್ತಿಗೆ ಭಾಗದಲ್ಲಿ ರಕ್ತದ ಕಲೆ ಇರುವುದು ಕಂಡು ಬಂದಿದೆ.
ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಕೋತಿಗಳನ್ನು ಕೊಂದು ತಂದು ಹಾಕಿರುವ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಂತರ ಈ ಬಗ್ಗೆ ಮಾಹಿತಿ ನೀಡಿದರೂ ಕನಿಷ್ಠ ಸ್ಥಳಕ್ಕೆ ಬಂದು ಏನಾಗಿದೆ ಎಂದು ಪರಿಶೀಲನೆ ಮಾಡುವ ಸೌಜನ್ಯವನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ತೋರದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ಸ್ಥಳೀಯ ಗ್ರಾಮಸ್ಥರೇ ಸೇರಿ ಮೃತಪಟ್ಟಿರುವ ಏಳು ಕೋತಿಗಳಿಗೆ ಪೂಜೆ ಸಲ್ಲಿಸಿ, ರಸ್ತೆ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಮಂಗಗಳು ವನ್ಯಜೀವಿ ರಕ್ಷಣೆ ಕಾಯ್ದೆ 1972ರ ಸಂರಕ್ಷಿತ ಕಾಯ್ದೆ ಅಡಿಯಲ್ಲಿದ್ದರೂ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ವನ್ಯಜೀವಿ ವಲಯ ಅರಣ್ಯ ಅಧಿಕಾರಿಗಳು ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಜವಾಬ್ದಾರಿಯನ್ನು ಹೊರಿಸಿ ಸುಮ್ಮನಾಗಿದ್ದಾರೆ ಎನ್ನುವುದು ಸ್ಥಳೀಯರ ದೂರಾಗಿದೆ. ಹಾಗಾದರೆ ಕೋತಿಗಳ ಸಾವಿಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳ ಸಾವಿಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಹಾವೇರಿ: 30 ಕಿಲೋ ಮೀಟರ್ ದೂರ ಬಸ್ನಲ್ಲಿ ಪ್ರಯಾಣಿಸಿದ ಕೋತಿ- ವಿಡಿಯೋ