ರಾಮನಗರ : ರೇಷ್ಮೆನಗರಿ ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿಗೆ ಸೇರಿದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುವುದು ಬೇಡ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ನಾನೇ ಮೆಡಿಕಲ್ ಕಾಲೇಜಿಗೆ 100 ಕೋಟಿ ಹಣ ಕೊಟ್ಟಿದ್ದೆ. ಡಿ ಕೆ ಶಿವಕುಮಾರ್ ಆಗ ವೈದ್ಯಕೀಯ ಸಚಿವರಾಗಿದ್ದರು. ಟೆಂಡರ್ ಕೊಟ್ಟಿದ್ದೂ ಕೂಡಾ ಇನ್ನೂ ಜೀವಂತವಾಗಿದೆ. ಆ ಬಳಿಕ ಬಿಜೆಪಿ ಸರ್ಕಾರ ಬಂದು ಕನಕಪುರಕ್ಕೆ ಕೊಟ್ಟಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಯಿತು. ಈಗ ನಿಮ್ಮದೇ ಸರ್ಕಾರ ಇದೆ. ನಾನು ಕೊಟ್ಟಿದ್ದ ಆ ಮೆಡಿಕಲ್ ಕಾಲೇಜಿಗೆ ಜೀವಕೊಡಿ. ಆದರೆ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೊಂಬೆನಗರಿ ಚನ್ನಪಟ್ಟಣದಲ್ಲಿ ಬಮೂಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, 2006ರಲ್ಲಿ ರಾಮನಗರಕ್ಕೆ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಬಂತು. ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಆಸ್ಪತ್ರೆ ಬೇಕೆಂದು ನಾನು ಕನಸು ಕಂಡಿದ್ದೆ. 600 ಕೋಟಿ ರೂಪಾಯಿ ವೆಚ್ಚದಲ್ಲಿ ಹಿಂದಿನ ಸರ್ಕಾರ ಎರಡೂ ಸದನದಲ್ಲಿ ಅನುಮೋದನೆ ಕೊಟ್ಟಿತ್ತು. ಈಗ ಮೆಡಿಕಲ್ ಕಾಲೇಜು ಸ್ಥಳಾಂತರ ಸರಿಯಲ್ಲ. ಇದು ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತದೆ. ಜಿಲ್ಲಾ ಕೇಂದ್ರ ಬಿಟ್ಟು ಅಲ್ಲೆಲ್ಲೋ ಮೂಲೆಗೆ ಮೆಡಿಕಲ್ ಕಾಲೇಜು ಸ್ಥಳಾಂತರ ಅವೈಜ್ಞಾನಿಕ. ಹೀಗೆ ಆದರೆ ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಗಳು ಬರಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಮನಗರ ಜಿಲ್ಲಾ ಕೇಂದ್ರ, ಇಲ್ಲಿ ಮೆಡಿಕಲ್ ಕಾಲೇಜು ಬಂದರೆ ಸುತ್ತಮುತ್ತಲಿನ ತಾಲೂಕುಗಳಿಗೂ ಅನುಕೂಲ. ಕನಕಪುರಕ್ಕೆ ಮೆಡಿಕಲ್ ಕಾಲೇಜು ಬೇಕೇ ಬೇಕು ಅಂದರೆ ಅವರದ್ದೇ ಸರ್ಕಾರ ಇದೆ. ಹೊಸ ಕಾಲೇಜು ಮಂಜೂರು ಮಾಡಿಕೊಳ್ಳಲಿ. ಅದನ್ನು ಬಿಟ್ಟು ಇದ್ದ ಕಾಲೇಜು ಸ್ಥಳಾಂತರ ಮಾಡೋದು ರಾಮನಗರಕ್ಕೆ ಮಾಡಿದ ಅವಮಾನ ಎಂದರು.
ಇದನ್ನೂ ಓದಿ: ನನ್ನ ಮೇಲಿನ ಭಯದಿಂದ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ: ಚಲುವರಾಯಸ್ವಾಮಿಗೆ ಹೆಚ್ಡಿಕೆ ಟಾಂಗ್
ಮುಂದಿನ ಬಜೆಟ್ನಲ್ಲಿ ರಾಮನಗರಕ್ಕೆ ಮೆಡಿಕಲ್ ಕಾಲೇಜು ಎಂಬ ಉಸ್ತುವಾರಿ ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮುಂದಿನ ಬಜೆಟ್ ಮಂಡನೆ ಆಗದಿದ್ದರೆ? ಬಜೆಟ್ನಲ್ಲಿ ತರುವುದು ಬೇರೆ ವಿಚಾರ. ಇಲ್ಲಿ ಮೆಡಿಕಲ್ ಕಾಲೇಜಿನ ಕೆಲಸ ಪ್ರಾರಂಭವಾಗಿದೆ. ಅದನ್ನು ನಿಲ್ಲಿಸಿ ಕನಕಪುರಕ್ಕೆ ಶಿಫ್ಟ್ ಮಾಡಬಾರದು ಎಂದು ಹೇಳಿದರು.
ಡಿಕೆ ಬ್ರದರ್ಸ್ ವಿರುದ್ಧ ಗುಡುಗಿದ ಹೆಚ್ಡಿಕೆ - ಆದಷ್ಟು ಶೀಘ್ರದಲ್ಲೇ ನೈಸ್ ಅಕ್ರಮಗಳ ದಾಖಲೆ ಬಹಿರಂಗ ಮಾಡುತ್ತೇನೆ ಎಂದು ಡಿ ಕೆ ಬ್ರದರ್ಸ್ ವಿರುದ್ಧ ಹೆಚ್ಡಿಕೆ ಗುಡುಗಿದ್ದಾರೆ. ನೈಸ್ ಕಂಪನಿ ಅಕ್ರಮ ಬಹಳಷ್ಟು ಆಗಿದ್ದು, ಶೀಘ್ರದಲ್ಲೇ ದಾಖಲೆ ಸಮೇತ ನಾನೇ ನಿಮ್ಮ ಮುಂದೆ ಇಡುವುದಾಗಿ ಡಿ. ಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನಿಷ್ಠೆ ಉಳಿದಿಲ್ಲ, ತಕ್ಷಣಕ್ಕೆ ಸಿಗುವ ಅಧಿಕಾರಕ್ಕೆ ಮರುಳಾಗ್ತಾರೆ: ಹೆಚ್.ಡಿ.ಕುಮಾರಸ್ವಾಮಿ