ರಾಮನಗರ: ಚನ್ನಪಟ್ಟಣ ತಾಲೂಕಿನ ಗೌಡಗೆರೆಯ 64 ಅಡಿ ಎತ್ತರದ ಐತಿಹಾಸಿಕ ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಮಹಾಮಸ್ತಕಾಭಿಷೇಕ ಅದ್ಧೂರಿಯಾಗಿ ಜರುಗಿತು. ಸುಮಾರು 37,247 ಕೆ.ಜಿ ವಿವಿಧ ದ್ರವ್ಯಗಳಿಂದ ನಾಡದೇವತೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಸ್ತಕಾಭಿಷೇಕ ನೆರವೇರಿತು.
ಇದೇ ಪ್ರಥಮ ಬಾರಿಗೆ ಚಾಮುಂಡೇಶ್ವರಿಗೆ ಮಹಾಮಸ್ತಕಾಭಿಷೇಕ: 45 ಬಗೆಯ ವಿವಿಧ ದ್ರವ್ಯಗಳಿಂದ ಇದೇ ಮೊಟ್ಟಮೊದಲ ಬಾರಿಗೆ ಚಾಮುಂಡೇಶ್ವರಿಗೆ ಮಹಾಮಸ್ತಕಾಭಿಷೇಕ ನೆರವೇರಿಸಲಾಯಿತು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಡಾ.ಅಶ್ವಥ್ ನಾರಾಯಣ್ ಸೇರಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಅಪರೂಪದ ಮಸ್ತಾಭಿಷೇಕವನ್ನು ಕಣ್ತುಂಬಿಕೊಂಡರು.
ಬಾಹುಬಲಿ ಮಸ್ತಕಾಭಿಷೇಕ ಮಾದರಿಯಲ್ಲೆ ಸೇವೆ: ಚಾಮುಂಡೇಶ್ವರಿ ವಿಗ್ರಹ ಸುಮಾರು 35 ಸಾವಿರ ಕೆ.ಜಿ ತೂಕವುಳ್ಳ, 68 ಅಡಿ ಎತ್ತರವಿದೆ. ಪಂಚಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆಯಿಂದ ವಿಗ್ರಹ ತಯಾರಾಗಿದೆ. 18 ಭುಜಗಳುಳ್ಳ ಸೌಮ್ಯ ರೂಪದಲ್ಲಿ ನಿಂತಿರುವ ಚಾಮುಂಡಿ ತಾಯಿಯ ವಿಗ್ರಹವನ್ನು ನೋಡಲು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಇದು ವಿಶ್ವದಲ್ಲಿಯೇ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹ ಎಂಬ ಖ್ಯಾತಿ ಗಳಿಸಿದೆ. ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ಅವರು ಈ ಮಹಾಕಾರ್ಯವನ್ನು ನೆರವೇರಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಪ್ರತಿ ಭಕ್ತರಿಗೂ ದೇವರಿಗೆ ಅಭಿಷೇಕ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಓದಿ : ಅಧಿಕಾರ ನಾಡಿನ ಶ್ರೇಯಸ್ಸಿಗಾಗಿ, ಅದು ವ್ಯಕ್ತಿಗತ ಆಗಿರಬಾರದು: ಸಚಿವ ಅಶ್ವತ್ಥನಾರಾಯಣ್