ರಾಮನಗರ: ಮಾಗಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುಖ್ಯಾತ ಮನೆಗಳ್ಳನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಹಲವು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ. ಆರೋಪಿಯಿಂದ 36.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ.
ಮನೆ ಕಳ್ಳತನ ಮಾಗಡಿ ಪೊಲೀಸರಿಗೆ ಭಾರಿ ತಲೆ ನೋವು ತಂದಿತ್ತು. ಸತತ ಒಂದು ತಿಂಗಳಿಂದ ಸರಣಿ ಮನೆ ಹಾಗೂ ಅಂಗಡಿ ಕಳ್ಳತನವಾಗಿ ಪೊಲೀಸರಿಗೆ ಆರೋಪಿ ಬಂಧನಕ್ಕೆ ತೀವ್ರ ಒತ್ತಡ ಇತ್ತು. ಈ ಬೆನ್ನಲ್ಲೆ ಮಾಗಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಟೋರಿಯಸ್ ಮನೆಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಬಂಧನಕ್ಕಾಗಿಯೇ ಮಾಗಡಿ ಡಿವೈಎಸ್ಪಿ ಓಂ ಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿ ಸುಳಿವು ಹಿಡಿದ ತಂಡ ತುಮಕೂರು ಜಿಲ್ಲೆಗೆ ತೆರಳಿತ್ತು. ತುಮಕೂರು ಜಿಲ್ಲೆಯ ಊರ್ಡಿಗೆರೆ ಹೋಬಳಿ ಜ್ಯೋತಿಪುರ ಗ್ರಾಮದ ರಘು (29) ಎಂಬುವನನ್ನು ಬಂಧಿಸಿ ವಿಚಾರಿಸಿದಾಗ ಆರೋಪಿಯ ನಿಜ ಬಣ್ಣ ಬಯಲಾಗಿದೆ.
ಆರೋಪಿ ರಘು 11 ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನು. ಬಂಧಿತನಿಂದ 36 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ, ಈತನ ವಿರುದ್ದ ತುಮಕೂರು ಗ್ರಾಮಾಂತರ ಕೊರಟಗೆರೆ ಠಾಣೆಯಲ್ಲಿಯೂ ಸಹ 15 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.