ರಾಮನಗರ: ವಿವಾಹಿತೆಯೊಬ್ಬಳು ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕು ಕಬ್ಬಾಳು ಗ್ರಾಮದಲ್ಲಿ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚಿಟಿ ತಾಲೂಕು ಉರುಗ್ಯಂ ಗ್ರಾಮದ ಚಂದನ (20) ಹಾಗೂ ಅದೇ ಗ್ರಾಮದ ಸತೀಶ್ ಕುಮಾರ್ (24) ಆತ್ಮಹತ್ಯೆ ಮಾಡಿಕೊಂಡವರು.
ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕಬ್ಬಾಳು ಬೆಟ್ಟದಲ್ಲಿ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.
ಚಂದನಳ ಪೋಷಕರು ತಮ್ಮ ಗ್ರಾಮದ ಪಕ್ಕವಿರುವ ದೊಡ್ಡಮರಳ್ಳಿ ಗ್ರಾಮದ ಗಣೇಶ್ ಎಂಬಾತನ ಜೊತೆ ಕಳೆದ ವರ್ಷ ಮದುವೆ ಮಾಡಿಕೊಟ್ಟಿದ್ದರು. ಗಣೇಶ್ ಪ್ರಸ್ತುತ ಕನಕಪುರದ ವಾಸು ಹೋಟೆಲ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದು, ಕುಟುಂಬದೊಡನೆ ವಾಸವಿದ್ದ ಎಂದು ಹೇಳಲಾಗಿದೆ.
ಒಂದೇ ಗ್ರಾಮದವರಾದ ಚಂದನ ಮತ್ತು ಸತೀಶ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಬೇರೊಬ್ಬನ ಜೊತೆ ಮದುವೆ ಮಾಡಿಕೊಟ್ಟಿದ್ದರಿಂದ ಆಕೆ ನೊಂದಿದ್ದಳು ಎಂಬ ಮಾಹಿತಿ ದೊರೆತಿದೆ.
ಸೆ. 22 ರಂದು ಚಂದನ ಮನೆಯಿಂದ ಕಾಣೆಯಾಗಿದ್ದಳು. ಬಳಿಕ ಆಕೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇದೀಗ ತನ್ನ ಪ್ರಿಯಕರನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬೆಟ್ಟದಲ್ಲಿ ಓಡಾಡುವ ದನಗಾಯಿಗಳು ಹಾಗೂ ಗ್ರಾಮಸ್ಥರಿಗೆ ಕೊಳೆತು ನಾರುತ್ತಿದ್ದ ಶವಗಳ ಸುಳಿವು ಸಿಕ್ಕಿದೆ. ನಂತರ ಹತ್ತಿರದ ಸಾತನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಕನಕಪುರ ಸಿಪಿಐ ಕೃಷ್ಣ ಹಾಗೂ ಸಾತನೂರು ಪಿಎಸ್ಐ ರವಿಕುಮಾರ್ ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಚಂದನಳ ತಾಯಿ ರತ್ನಮ್ಮ ತಮ್ಮ ಪುತ್ರಿ ಕಾಣೆಯಾಗಿರುವ ಬಗ್ಗೆ ಕನಕಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಕಡಬ ಪೊಲೀಸ್ ಸಿಬ್ಬಂದಿಯ ಲೈಂಗಿಕ ದೌರ್ಜನ್ಯ ಸ್ಟೋರಿ ವೈರಲ್: ದೂರು ಬಂದ್ರೆ ಕ್ರಮ- ಡಿವೈಎಸ್ಪಿ