ರಾಮನಗರ: ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನನೊಂದು ಪ್ರೇಮಿಗಳಿಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ರೇಷ್ಮೆನಗರಿ ರಾಮನಗರ ಹೊರವಲಯದ ಕುಂಬಾಪುರ ಗೇಟ್ ಬಳಿ ಜರುಗಿದೆ.
ನವ್ಯ (19) ಹಾಗೂ ಹರ್ಷವರ್ಧನ (20) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ನವ್ಯ ಹಾಗೂ ಹರ್ಷವರ್ಧನ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದ ಪ್ರೇಮಿಗಳು ಬೈಕ್ನಲ್ಲಿ ರಾಮನಗರ ಹೊರವಲಯದ ಕುಂಬಾಪುರ ಗೇಟ್ ಬಳಿಗೆ ಬಂದು ಬೈಕ್ ದೂರದಲ್ಲಿ ನಿಲ್ಲಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರ ದೇಹದ ಮೇಲೆ ರೈಲು ಹರಿದ ಪರಿಣಾಮ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಚನ್ನಪಟ್ಟಣ ರೈಲ್ವೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ನಾಲ್ವರು ರೈತರು ಆತ್ಮಹತ್ಯೆ: ಬೆಳೆ ನಷ್ಟ ಹಾಗೂ ಸಾಲ ಬಾಧೆಯಿಂದ ಮನನೊಂದು ತೆಲಂಗಾನ ರಾಜ್ಯದ ವಿವೇಧಡೆ ಒಂದೇ ದಿನ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ತೆಲಂಗಾಣದ ಮುನುಗೋಡು, ಸಂಸ್ಥಾನ ನಾರಾಯಣಪುರ, ರೇಗೊಂಡ ಹಾಗೂ ಮುಲುಗು ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ವರದಿಯಾಗಿತ್ತು. ರಾಜಯ್ಯ, ರಾಮಕೃಷ್ಣ ರೆಡ್ಡಿ, ರಾಜಶೇಖರ್ ರೆಡ್ಡಿ, ಅನ್ನಂ ಕೃಷ್ಣ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ರೈತರಾಗಿದ್ದರು. ಅದರಲ್ಲೂ ಸಾಲ ತೀರಿಸಲಾಗದೆ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ ಸಂಸ್ಥಾನಂ ನಾರಾಯಣಪುರದ ರಾಜಶೇಖರ ರೆಡ್ಡಿ ಅವರ ಪತ್ನಿ ಒಂದು ವಾರದ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ: ಕೌಟುಂಬಿಕ ಕಲದಿಂದಾಗಿ ಮನನೊಂದ ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಮ್ಯಾಗಳಪೇಟೆಯಲ್ಲಿ ಇತ್ತೀಚೆಗೆ ನಡೆದಿತ್ತು. ಚೌಡಮ್ಮ ಎನ್ನುವ ಮಹಿಳೆ ತನ್ನ 4 ಹಾಗೂ 2 ವರ್ಷದ ಕಂದಮ್ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು, ಕೆರೆಯಿಂದ ಮೃತದೇಹಗಳನ್ನು ಹೊರತೆಗೆದು ಪ್ರಕರಣ ದಾಖಲಿಸಿಕೊಂಡಿದ್ದರು. ಪತಿ ಹಾಗೂ ಪತ್ನಿ ಮಧ್ಯ ಮನೆಯಲ್ಲಿ ಜಗಳವಾಗಿದ್ದು, ಇದರಿಂದ ಮನನೊಂದು ಚೌಡಮ್ಮ ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಬೆಳೆ ನಷ್ಟ, ಸಾಲಬಾಧೆ: ತೆಲಂಗಾಣದಲ್ಲಿ ನಾಲ್ವರು ರೈತರು ಆತ್ಮಹತ್ಯೆ!