ರಾಮನಗರ: ನಗರದಲ್ಲಿ ನಡೆಯುತ್ತಿದ್ದ ಕ.ಸಾ.ಪ ಸಮ್ಮೇಳನದ ಎರಡನೇ ದಿನದ ಸಮಾರಂಭದಲ್ಲಿ ಸಾಹಿತಿಗಳ ಮಧ್ಯೆ ಗಲಾಟೆ ಉಂಟಾಯಿತು.
ಎರಡನೇ ದಿನ ಸಾಹಿತ್ಯ ಸಮ್ಮೇಳನದಲ್ಲಿ ಗೊಂದಲ ಹೆಚ್ಚಾಗಿದ್ದು ಸಮ್ಮೇಳನಾಧ್ಯಕ್ಷ ಪ್ರೋ. ಎಂ. ಶಿವನಂಜಯ್ಯನವರ ಎದುರೇ ಜಗಳಕ್ಕೆ ಬಿದ್ದ ಕನ್ನಡ ಸಾಹಿತ್ಯ ಪರಿಷತ್ ಮುಖಂಡರು ಕೈ ಕೈ ಮಿಲಾಯಿಸುವ ಹಂತ ತಲುಪಿದ್ದರು. ಅಲ್ಲದೆ ಸಾಹಿತಿ ಎಲ್ಲೇಗೌಡ ಬೆಸಗರಹಳ್ಳಿ ಅವರ ಮೇಲೆ ಹರಿಹಾಯ್ದ ಘಟನೆ ನಡೆಯಿತು.
ಧರ್ಮದ ವಿಚಾರವಾಗಿ ನಡೆಯುತ್ತಿದ್ದ ಸಂವಾದದಲ್ಲಿ ಗದ್ದಲ ಉಂಟಾಗಿ ಸಮ್ಮೇಳನಾಧ್ಯಕ್ಷರಿಗೆ ಸಾಹಿತಿ ಎಲ್ಲೇಗೌಡ ಬೆಸಗರಹಳ್ಳಿ ಏರು ಧ್ವನಿಯಲ್ಲಿ ವೇದಿಕೆ ಬಳಿಗೆ ತೆರಳಿ ಪ್ರಶ್ನಿಸಿದರು. ಈ ವೇಳೆ ಎಲ್ಲೇಗೌಡ ವಿರುದ್ಧ ಸಮಾರಂಭದ ಆಯೋಜಕರು ತಿರುಗಿಬಿದ್ದರು.
ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರಿಂದ ಸಮ್ಮೇಳನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕಾಟಾಚಾರಕ್ಕೆ ಸಮ್ಮೇಳನ ಎನ್ನುವಂತಿದ್ದರೂ ಆಯೋಜಕರ ನಿರ್ಲಕ್ಷ್ಯಕ್ಕೆ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವಲ್ಲಿ ನಿರುತ್ಸಾಹ ತೋರಿದರು. ಜೊತೆಗೆ ಸಮ್ಮೇಳನದಲ್ಲಿ ವಿಷಯಾಧಾರಿತ ಚರ್ಚೆ ನಡೆಯುವ ವೇಳೆ ಸಮ್ಮೇಳನ ಆಯೋಜಕರು ನಡೆದುಕೊಂಡ ರೀತಿ ಮಾತ್ರ ನೆರೆದವರ ಅಸಮಾಧಾನಕ್ಕೆ ಕಾರಣವಾಯಿತು.