ರಾಮನಗರ: ಮೇಕೆದಾಟು ಪಾದಯಾತ್ರೆಯ 2ನೇ ದಿನವೂ ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಪಾದಯಾತ್ರೆಗೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು. ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿದೆ.
ತೀವ್ರ ಜ್ವರದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಗೈರಾಗಿದ್ದರು. ಡಿಕೆಶಿ ಸಾರಥ್ಯದಲ್ಲೇ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೊರೊನಾ ನಿಯಮಗಳು ಸಂಪೂರ್ಣ ಬ್ರೇಕ್ ಮಾಡಿಕೊಂಡು ಎಲ್ಲರೂ ಹೊರಟಿದ್ದಾರೆ. ಯಾರು ಕೂಡ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಮಾಸ್ಕ್ ಅನ್ನು ಕೂಡ ಹಾಕಿಕೊಳ್ಳದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಪಾದಯಾತ್ರೆ ತಡೆಗೆ ಎಫ್ಐಆರ್ ಅಸ್ತ್ರ
ಈ ಸಂದರ್ಭದಲ್ಲಿ ಮಾತನಾಡಿದ ಡಿಕೆಶಿ, ಪಾದಯಾತ್ರೆ ನಿಲ್ಲಿಸಿಲು ಬಿಜೆಪಿ ಸರ್ಕಾರ ಶತಪ್ರಯತ್ನ ಮಾಡುತ್ತಲೇ ಇದೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ. ಮುಂದೆ ಒಂದು ಹೆಜ್ಜೆ ಇಟ್ಟಾಗಿದೆ. ಹಿಂದೆ ಇಡುವ ಪ್ರಶ್ನೆಯೇ ಇಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಅಜ್ಞಾನದ ಜ್ಞಾನೇಂದ್ರರಾಗಿದ್ದಾರೆ. ಪಾದಯಾತ್ರೆ ಮಾಡದಂತೆ ನೋಟಿಸ್ ನೀಡಿದ್ದಾರೆ. ಪಾದಯಾತ್ರೆ ತಡೆಯಲು ಎಫ್ಐಆರ್ ಅಸ್ತ್ರ ಬಳಸಿದ್ದಾರೆ. ಇದ್ಯಾವುದಕ್ಕೂ ನಾವು ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ವಾಗ್ಧಾಳಿ ನಡೆಸಿದರು.
ಇನ್ನು ಕೋವಿಡ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದಾರೆ ಅಷ್ಟೆ. ಜನರಿಗೆ ತೊಂದರೆ ಕೊಡಲು ವೀಕೆಂಡ್ ಕರ್ಫ್ಯೂ ವಿಧಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲು ಮಾಡಲಿ. ಈ ಹಿಂದೆ ಕೂಡ ಹಲವು ಬಿಜೆಪಿ ನಾಯಕರು ಕೂಡ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಅವರ ಮೇಲೂ ಕೂಡ ಕೇಸು ದಾಖಲಿಸಲಿ ಎಂದು ಡಿಕೆಶಿ ಸವಾಲು ಹಾಕಿದರು.
ಸಾತನೂರು ಠಾಣೆಯಲ್ಲಿ ದೂರು ದಾಖಲು
ಕೋವಿಡ್ ನಿಯಮಗಳನ್ನ ಯಾರು ಕೂಡ ಅನುಸರಿಸದೆ ಸಂಪೂರ್ಣವಾಗಿ ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಕನಕಪುರ ತಹಸೀಲ್ದಾರ್ ವಿಶ್ವನಾಥ್ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ.ಸುರೇಶ್, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಈಶ್ವರ್ ಖಂಡ್ರೆ, ಉಮಾಶ್ರೀ, ಹರಿಪ್ರಸಾದ್, ಎಂ.ಬಿ.ಪಾಟೀಲ್, ರಾಮಲಿಂಗರೆಡ್ಡಿ, ಸಾಧು ಕೋಕಿಲ ಸೇರಿದಂತೆ 30 ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ ಸೇರಿ 31 ಮಂದಿ ವಿರುದ್ಧ ಎಫ್ಐಆರ್ ದಾಖಲು