ರಾಮನಗರ: ಜಿಲ್ಲೆಯ ಕೊಳಗೊಂಡನಹಳ್ಳಿಯಲ್ಲಿ ಲಾಕ್ಡೌನ್ ಆದೇಶ ಉಲ್ಲಂಘನೆಯಾಗಿದೆ. ನೂರಾರು ಜನರು ಒಂದೇ ಕಡೆ ಸೇರಿ ಅದ್ಧೂರಿ ಗ್ರಾಮ ಹಬ್ಬ ಮಾಡಿ ಲಾಕ್ ಡೌನ್ ನಿಯಮವನ್ನು ಗಾಳಿಗೆ ತೂರಿದ್ದಾರೆ.
ಇಡೀ ದೇಶದಲ್ಲಿ ಲಾಕ್ಡೌನ್ ನಿಯಮ ಜಾರಿಯಲ್ಲಿದ್ದು, ಎಲ್ಲಿಯೂ ಜನರು ಗುಂಪು ಸೇರಬಾರದು ಎಂಬ ಆದೇಶ ಇದೆ. ಆದರೆ, ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಮಾತ್ರ ಈ ಆದೇಶ ಪಾಲನೆಯಾಗಿಲ್ಲ. ಒಂದು ಮೂಲದ ಪ್ರಕಾರ ಸ್ಥಳೀಯ ಗ್ರಾಮ ಪಂಚಾಯತ್ ಪಿಡಿಒ ಅನುಮತಿ ಪಡೆದು ಜಾತ್ರೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೇಳಿ ಕೇಳಿ ಕೊಳಗೊಂಡನಹಳ್ಳಿ ಗ್ರಾಮ ತಮಿಳುನಾಡಿನ ಗಡಿಗೆ ಕೂಗಳತೆ ದೂರದಲ್ಲಿ ಇದೆ. ಈಗಾಗಲೇ ತಮಿಳುನಾಡಿನಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿಯೇ ಕೊರೊನಾ ನಮ್ಮ ಗ್ರಾಮಕ್ಕೆ ಬರೋದು ಬೇಡವೆಂದು ಗ್ರಾಮಸ್ಥರು ಪಂಜು ಹಿಡಿದು ಗ್ರಾಮದ ಸುತ್ತ ಮೆರವಣಿಗೆ ಮಾಡಿದ್ದಾರೆ.
ಊರಿನ ಮಹಿಳೆಯರೆಲ್ಲ ತಂಬಿಟ್ಟಿನ ಆರತಿ ಮಾಡಿ ಒಂದೆಡೆ ಬಂದು ಸಾಮೂಹಿಕ ಪೂಜೆ ಸಲ್ಲಿಸಿದ್ದಾರೆ. ಇದೀಗ ಈ ಗ್ರಾಮದಲ್ಲಿ ಸಾಮೂಹಿಕ ಪೂಜೆ ನೆರವೇರಿಸಿದ ಕಾರಣ ಅಕ್ಕ ಪಕ್ಕದ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಗ್ರಾಮದಲ್ಲಿ ಹಬ್ಬ ಮಾಡಲು ಅನುಮತಿ ಸಿಕ್ಕಿತ್ತಾ ಅಥವಾ ಪೊಲೀಸರು ಈ ಬಗ್ಗೆ ಗೊತ್ತಿದ್ದರೂ ಸುಮ್ಮನಿದ್ರಾ ಎಂಬುದು ತಿಳಿದುಬಂದಿಲ್ಲ.