ರಾಮನಗರ: ಕೊರೊನಾ ಸೋಂಕಿತರಿಗೆ ಹಾಸಿಗೆ ದೊರೆಯುತ್ತಿಲ್ಲ, ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ, ಆಕ್ಸಿಜನ್ ಬೆಡ್ ಸಿಗುತ್ತಿಲ್ಲ ಎಂಬ ಕೆಲವರು ಆರೋಪಿಸಿ, ಚನ್ನಪಟ್ಟಣ ಆಸ್ಪತ್ರೆಯಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಹಾಗೂ ವೈದ್ಯಕೀಯ ಉಪಕರಣಗಳನ್ನು ಹೊತ್ತುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಶರವೇಗದಲ್ಲಿ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿ ದಿನಕ್ಕೆ 500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹಾಸಿಗೆ, ಆಕ್ಸಿಜನ್‌ಗಾಗಿ ಜನರು ಪರದಾಡುತ್ತಿದ್ದಾರೆ. ಆದರೆ, ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದಷ್ಟು ಮಂದಿ ಏಕಾಏಕಿ ಆಸ್ಪತ್ರೆಗೆ ನುಗ್ಗಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಆಕ್ಸಿಜನ್ ಸಿಲಿಂಡರ್‌ಗಳನ್ನು ಸಾಗಿಸಿದ್ದಾರೆ.
ಆಸ್ಪತ್ರೆಗೆ ಚನ್ನಪಟ್ಟಣದ ಸೋಂಕಿತನೊಬ್ಬ ದಾಖಲಾಗಿದ್ದ. ಈತನಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಆಕ್ಸಿಜನ್ ಸಹ ಪೂರೈಕೆ ಮಾಡುತ್ತಿಲ್ಲ ಎಂದು ಈತನ ಸಂಬಂಧಿಕರು ಆರೋಪಿಸಿ, 15 ರಿಂದ 20 ಮಂದಿ ಜೊತೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಗುಂಪು ಕಟ್ಟಿಕೊಂಡು ಆಸ್ಪತ್ರೆಗೆ ನುಗ್ಗಿದ್ದಾರೆ.
ಮಾಸ್ಕ್ ಧರಿಸಿದೆ, ಕೋವಿಡ್ ವಾರ್ಡ್‌ನಲ್ಲಿ ಗಲಾಟೆ ಮಾಡಿ, ಅಲ್ಲಿದ್ದ ನರ್ಸ್ ಸೇರಿದಂತೆ ಡಿ ಗ್ರೂಪ್ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಪಲ್ಸ್ ಆಕ್ಸಿ ಮೀಟರ್ ಅನ್ನು ಹೊಡೆದು ಹಾಕಿ, ಆಕ್ಸಿಜನ್ ಕಾನ್ಸ್ನರ್ಟೇಟರ್, 4 ಆಕ್ಸಿಜನ್ ಸಿಲಿಂಡರ್, 10 ಆಕ್ಸಿಜನ್ ಫ್ಲೋ ಮೀಟರ್, 1 ಸ್ಪ್ಯಾನರ್, 1 ಜಕ್ಷನ್ ಬಾಕ್ಸ್ ಅನ್ನು ಎತ್ತಿಕೊಂಡು ಹೋಗಿದ್ದಾರೆ. ಇದರ ಅಂದಾಜು ಮೌಲ್ಯ 1.25 ಲಕ್ಷ ರೂ. ಎನ್ನಲಾಗಿದೆ.
ಈ ಸಂಬಂಧ ಚನ್ನಪಟ್ಟಣ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಕೆಲಸದ ಒತ್ತಡಗಳಿಂದಾಗಿ ನಲುಗುತ್ತಿರುವ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಚನ್ನಪಟ್ಟಣದ ಪ್ರಕರಣದಿಂದ ಇನ್ನಷ್ಟು ಜರ್ಜರಿತರಾಗಿದ್ದಾರೆ ಎನ್ನಲಾಗಿದೆ.