ರಾಮನಗರ: ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸೋತಿದ್ದಾರೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ತವರು ಜಿಲ್ಲೆಯ ಜನರು ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಲು ತೀರ್ಮಾನಿಸಿರುವ ಗ್ರಾಮಸ್ಥರು, ಹಲವು ವರ್ಷಗಳಿಂದ ಗ್ರಾಮದ ರಸ್ತೆ, ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಅದನ್ನು ಸರಿಪಡಿಸುವಂತೆ ಹತ್ತಾರು ಬಾರಿ ಮನವಿ ಮಾಡಿದ್ದೇವೆ. ಆದರೆ, ಈವರೆಗೂ ಯಾವ ಕಾರ್ಯಗಳು ನಡೆದಿಲ್ಲ. ನಾವು ಯಾವ ಪುರುಷಾರ್ಥಕ್ಕಾಗಿ ಮತ ನೀಡಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಚುನಾವಣೆ ಸಮಯದಲ್ಲೂ ಸುಳ್ಳು ಆಶ್ವಾಸನೆ ಕೊಟ್ಟು ಮೋಸ ಮಾಡುತ್ತಿದ್ದಾರೆ. ಈ ಬಾರಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಜನಪ್ರತಿನಿಧಿ ಬಂದರೂ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಗ್ರಾಮ ಅಭಿವೃದ್ಧಿ ಮಾಡುವವರಿಗೆ ಮಾತ್ರ ನಾವು ಮತ ಹಾಕುವೆವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.