ರಾಮನಗರ: ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯತ್ನ ಮಾಡ್ತಿದ್ದಾರೆ. ಅವರು ಮಾಡುವ ಮೀಟಿಂಗ್ ಎಲ್ಲಾ ನೋಡಿದ್ರೆ ನಾನೇ ಮುಂದಿನ ಕಾಂಗ್ರೆಸ್ ಅಧಿಪತಿ ಅನ್ನೋ ರೀತಿ ಬಿಂಬಿಸಿಕೊಳ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹಾಲಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಹೇಳಿದರು.
ರಾಮನಗರದ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ ಅವರು, ನಾನು ಕೂಡ ಇಷ್ಟು ದಿನ ಈ ಬಗ್ಗೆ ಮಾತನಾಡದೆ ಸುಮ್ನಿದ್ದೆ. ನಮ್ಮ ಪಕ್ಷದ ಕೆಲವರು ಡಿ.ಕೆ.ಶಿವಕುಮಾರ್ ಅವರಿಗೆ ಬೆಂಬಲ ಕೊಡ್ತಿದ್ದ ವಿಚಾರವೆಲ್ಲವೂ ಕೂಡ ಸೂಕ್ಷ್ಮವಾಗಿ ನಮ್ಮ ಹೈಕಮಾಂಡ್‌ಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದೆಲ್ಲಾ ಡಿ.ಕೆ.ಬ್ರದರ್ಸ್‌ಗೆ ಆತಂಕ ಮೂಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಕುಂಠಿತ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷ ನನಗೆ ಒಂದು ಜವಾಬ್ದಾರಿ ನೀಡಬೇಕು. ಜನವರಿ 15ರ ನಂತರ ಏನೆಲ್ಲಾ ಆಗುತ್ತೆ ನೋಡೋಣ. ಮಾಜಿ ಸಿಎಂ ಹೆಚ್ಡಿಕೆ ಅವರು ಸುಧೀರ್ಘವಾಗಿ ಜಿಲ್ಲೆಯಲ್ಲಿ ರಾಜಕಾರಣ ಮಾಡ್ತಿದ್ದಾರೆ. ಜಿಲ್ಲೆಗೆ ಹೆಚ್ಡಿಕೆ ಹಾಗೂ ಡಿಕೆಶಿ ಕೆಲವೊಂದು ಅಭಿವೃದ್ಧಿ ಮಾಡಿದ್ದಾರೆ. ಅದನ್ನೇ ದೊಡ್ಡ ರೀತಿಯಲ್ಲಿ ಬಿಂಬಿಸುವ ಅವಶ್ಯಕತೆ ಇಲ್ಲ. ಸಚಿವ ಅಶ್ವತ್ಥ್ ನಾರಾಯಣ ಅವರು ರಾಮನಗರ ಜಿಲ್ಲೆಯವರು. ಸಾರ್ವಜನಿಕ ಜೀವನದಲ್ಲಿ ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
'ಮುಳುಗುತ್ತಿರುವ ಕಾಂಗ್ರೆಸ್ ಪಕ್ಷ ಸೇರೋಲ್ಲ'
ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರೆ ಸೂಸೈಡ್ ಮಾಡಿಕೊಂಡಂತೆ. ಕೆಲ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಈ ಬಗ್ಗೆ ವಿಚಾರ ಪ್ರಸ್ತಾಪ ಆಗಿತ್ತು. ನಾನು ಬಹಳ ಹಿಂದೆಯೇ ಪಕ್ಷಾಂತರ ಮಾಡಿ ಪಕ್ಷಾಂತರಿ ಆಗಿದ್ದೇನೆ. ನಾನು ಭಾರತೀಯ ಜನತಾ ಪಾರ್ಟಿಯಲ್ಲೇ ಇರ್ತಿನಿ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Omicron scare: ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ.. ಆದಾಯ ಖೋತಾ
'ಡಿಕೆಶಿಯಿಂದ ನಿರಂತರ ಕಿರುಕುಳ'
ಪಕ್ಷ ಬಿಡುವ ಯಾವುದೇ ಚಿಂತನೆ ಇಲ್ಲ. ನಾನು ರಾಜಕೀಯ ಆರಂಭ ಮಾಡಿ 25 ವರ್ಷಗಳೇ ಕಳೆದಿದೆ. ಕಾಂಗ್ರೆಸ್ ಪಕ್ಷದಿಂದಲೇ ನಾನು ರಾಜಕಾರಣ ಆರಂಭ ಮಾಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದ ಸಂಧರ್ಭದಲ್ಲೇ ಡಿ.ಕೆ.ಶಿವಕುಮಾರ್ ನನ್ನ ಬೆಳವಣಿಗೆ ಸಹಿಸಿರಲಿಲ್ಲ. ನಂತರದ ದಿನಗಳಲ್ಲಿ ನಾನು ಬಿಜೆಪಿ ಪಕ್ಷ ಸೇರ್ಪಡೆಯಾದೆ. ಡಿ.ಕೆ.ಶಿವಕುಮಾರ್ ಅವರ ನಿರಂತರವಾದ ಕಿರುಕುಳದಿಂದ ನಾನು ಮತ್ತೆ ಬೇರೆ ಪಕ್ಷದಿಂದ ಚುನಾವಣೆ ಎದುರಿಸಿದ್ದೇನೆ ಎಂದು ವಿವರಿಸಿದರು.
ಮೇಕೆದಾಟು ಯೋಜನೆ ಜಾರಿಗೆ ಕೆಲವೊಂದು ಟೆಕ್ನಿಕಲ್ ಸಮಸ್ಯೆ ಇದೆ. ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ತಮಿಳುನಾಡು ಸಿಎಂ ಜೊತೆ ಮಾತನಾಡಿ ಕೇಸ್ ವಾಪಸ್ಗೆ ಒತ್ತಾಯ ಮಾಡಲಿ. ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ಕೇಸ್ ನಡೆಯುತ್ತಿದೆ. ಅದನ್ನು ಬಿಟ್ಟು ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು ಎಂದರು.
'ಪಕ್ಷ ಒಪ್ಪಿದ್ರೆ ಕನಕಪುರದಿಂದಲೇ ಸ್ಪರ್ಧೆ'
ಬಿಜೆಪಿ ಹೈಕಮಾಂಡ್ ಕನಕಪುರ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸೂಚಿಸಿದ್ರೆ ಕನಕಪುರ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಚನ್ನಪಟ್ಟಣ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ. ಮುಂದಿನ ಚುನಾವಣೆ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಅದು ಚನ್ನಪಟ್ಟಣ ಕ್ಷೇತ್ರದಿಂದಲೇ ಸ್ಪರ್ದಿಸುತ್ತೇನೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಕನಕಪುರ ಕ್ಷೇತ್ರದಿಂದ ನೀವು ಸ್ಪರ್ಧಿಸಬೇಕೆಂದು ತೀರ್ಮಾನ ತೆಗೆದುಕೊಂಡ್ರೆ ನನಗೆ ಯಾವುದೇ ಭಯ ಇಲ್ಲ ಎಂದರು.