ರಾಮನಗರ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿಯಾಗುತ್ತಿದೆ. ರಾಮನಗರ ಸಿಇಒ ದಿಟ್ಟ ಕ್ರಮದಿಂದ ಜಿಲ್ಲೆಯ 150ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಅಭಿವೃದ್ಧಿಯಾಗುತ್ತಿವೆ.
ರೇಷ್ಮೆನಗರಿ ರಾಮನಗರ ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಚಾಲನೆ ಸಿಗುತ್ತಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದವರೂ ಈಗ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಸರಿಯಾದ ಶೌಚಾಲಯ ಇಲ್ಲ. ಕಟ್ಟಡ ವ್ಯವಸ್ಥೆ ಇಲ್ಲ. ಸರಿಯಾಗಿ ಶಿಕ್ಷಕರು ಪಾಠ ಮಾಡೋದಿಲ್ಲ. ಕ್ರೀಡಾಂಗಣ ಇಲ್ಲ ಹೀಗೆ ಹಲವಾರು ಸಮಸ್ಯೆಗಳು ಸರ್ಕಾರಿ ಶಾಲೆಗಳಲ್ಲಿ ಕೇಳಿ ಬರುತ್ತಿದ್ದರಿಂದ ಪೋಷಕರು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದರು.
ಇದನ್ನು ಮನಗಂಡ ರಾಮನಗರ ಸಿಇಒ ಇಕ್ರಂ ಅವರು ಸರ್ಕಾರ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾರೆ. ಪ್ರಾಥಮಿಕ ಹಂತವಾಗಿ ರಾಮನಗರ ಜಿಲ್ಲೆಯ 150 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನ ಗುರುತಿಸಲಾಗಿದೆ. ಈ ಶಾಲೆಗಳಲ್ಲಿ ಮೊದಲಿಗೆ ಶೌಚಾಲಯ, ಹಸಿರು ವನ, ಬ್ಯಾಸ್ಕೇಟ್ ಬಾಲ್ ಕ್ರೀಡಾಂಗಣ, ಟೆನಿಸ್ ಕ್ರೀಡಾಂಗಣ, ಉತ್ತಮ ಕಟ್ಟಡ, ಅಥ್ಲೆಟಿಕ್ ಕ್ರೀಡಾಂಗಣ ನಿರ್ಮಾಣ ಮಾಡುತ್ತಿದ್ದಾರೆ.
ಅಭಿವೃದ್ಧಿಯತ್ತ ಜಿಲ್ಲೆಯ ಸರ್ಕಾರಿ ಶಾಲೆಗಳು: ಇದರ ಮೊದಲ ಹಂತವಾಗಿ ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಈಗಾಗಲೇ ಸರ್ವೇ ಇಲಾಖೆಯಿಂದ ಜಾಗ ಗುರುತು ಮಾಡಿಕೊಂಡು ಸುಸಜ್ಜಿತ ಕ್ರೀಡಾಂಗಣ ಮಾಡುವ ಕಾರ್ಯ ಆರಂಭಗೊಂಡಿದೆ.
ಖಾಸಗಿ ಶಾಲೆ ಮೀರಿಸುವಂತೆ ಸರ್ಕಾರಿ ಶಾಲೆ: ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಮೂಲ ಸಮಸ್ಯೆಗಳು ತಾಂಡವವಾಡುತ್ತಿದ್ದವು. ಸರ್ಕಾರ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ನಾನಾ ಯೋಜನೆ ರೂಪಿಸಿದರೂ, ಯಾವುದೇ ಪ್ರಯೋಜನ ಆಗುತ್ತಿರಲಿಲ್ಲ. ಈಗ ಮತ್ತೊಮ್ಮೆ ಸರ್ಕಾರ ನರೇಗಾ ಕಾಮಗಾರಿ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಚಿಂತನೆ ನಡೆಸಿದೆ.
ಶಾಲೆಗಳ ಕ್ರೀಡಾಂಗಣ ಅಭಿವೃದ್ಧಿ ಸೇರಿದಂತೆ ಮೂಲ ಸೌಲಭ್ಯ ವಂಚಿತ ಸರ್ಕಾರಿ ಶಾಲೆಯ ಅಭಿವೃದ್ಧಿ ಬಗ್ಗೆ ಹೆಚ್ವು ಗಮನ ಹರಿಸಿ ಹಳ್ಳಿಯ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು150ಕ್ಕೂ ಹೆಚ್ಚು ಶಾಲೆಗಳ ಕ್ರೀಡಾಂಗಣ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಸಿಒಒ ಇಕ್ರಂ ತಿಳಿಸಿದ್ದಾರೆ.
ಇದನ್ನೂ ಓದಿ: ಹಾವೇರಿಯ ಈ ದೇವಸ್ಥಾನದಲ್ಲಿ ವಿಶಿಷ್ಟ ಆಚರಣೆ: ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ಬೀಗ ಹಾಕುವ ಭಕ್ತರು