ರಾಮನಗರ: ನಿಖಿಲ್ ಅವರ ವಿವಾಹ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುವ ಹಿನ್ನೆಲೆ ರಾಮನಗರ ಮತ್ತು ಚನ್ನಪಟ್ಟಣ ಬಳಿಯ ಅರ್ಚಕರಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು 54 ಎಕರೆ ಪ್ರದೇಶವನ್ನು ಗುರುತಿಸಿ, ಪರಿಶೀಲನೆ ನಡೆಸಿದ್ದಾರೆ.
ಫೆ.10ರಂದು ಬೆಂಗಳೂರಿನಲ್ಲಿ ನಿಖಿಲ್ ನಿಶ್ಚಿತಾರ್ಥ ನೆರವೇರಲಿದ್ದು, ಹಿರಿಯರ ಸಮ್ಮುಖದಲ್ಲಿ ಮದುವೆ ದಿನಾಂಕ ನಿಗದಿಯಾಗಲಿದೆ ಎಂದು ಹೇಳಿದ್ದರು. ಈ ಹಿನ್ನೆಲೆ ರಾಮನಗರ ಮತ್ತು ಚನ್ನಪಟ್ಟಣ ಬಳಿಯ ಅರ್ಚಕರ ಹಳ್ಳಿಯಲ್ಲಿ ಜಾಗ ಪರಿಶೀಲನೆ ನಡೆಸಿದ್ದಾರೆ.
ರಾಮನಗರ ತಮಗೆ ರಾಜಕೀಯವಾಗಿ ಜನ್ಮ ನೀಡಿದೆ. ಹೀಗಾಗಿ ಜಿಲ್ಲೆಯ ಜನರ ಆಶೀರ್ವಾದ ಮಗನಿಗೂ ಸಿಗಲಿ. ಈ ಕಾರಣಕ್ಕಾಗಿ ರಾಮನಗರದಲ್ಲೇ ಮದುವೆ ಮಾಡುತ್ತೇನೆ ಎಂದು ಇತ್ತೀಚೆಗೆ ಹೇಳಿದ್ದರು. ಇನ್ನು ಜಮೀನಿನ ಮಾಲೀಕರೊಂದಿಗೆ ಹೆಚ್ಡಿಕೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 54 ಎಕರೆಯಲ್ಲಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್(ಸಿಎಂಎ) ಗೆ 22 ಎಕರೆ, ಉದ್ಯಮಿಯೊಬ್ಬರಿಗೆ 23 ಎಕರೆ ಜಮೀನು ಸೇರಿದ್ದು, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸ್ಥಳ ರಾಮನಗರದಿಂದ 5 ಕಿ.ಮೀ ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ ದೂರದಲ್ಲಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿಯೇ ಇರುವ ಈ ಜಾಗ ಸೂಕ್ತವಾದ ಸ್ಥಳವೆಂಬ ನಿರ್ಧಾರಕ್ಕೆ ಬಂದಿದ್ದು, ಭೋಜನ ವ್ಯವಸ್ಥೆ ಹಾಗೂ ವಾಹನಗಳ ನಿಲುಗಡೆಗಾಗಿಯೇ ಪ್ರತ್ಯೇಕ ಸ್ಥಳಗಳ ವ್ಯವಸ್ಥೆ ಮಾಡಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.