ರಾಮನಗರ: ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಮಾಜಿ ಸಿಎಂ ಹೆಚ್ಡಿಕೆ ಆಗಮಿಸಿದ್ದು, ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಗೂ ಡಿ.ಕೆ.ಶಿವಕುಮಾರ್ ಬಂಧನ ಕುರಿತು ನಡೆಯುತ್ತಿರುವ ರ್ಯಾಲಿಗೆ ಆಹ್ವಾನಿಸಿರಲಿಲ್ಲ, ತರಾತುರಿಯಲ್ಲಿ ನಡೆಸುತ್ತಿದ್ದಾರೆ. ತಿಳಿಸಿದ್ದರೆ ನಾನೂ ಪಾಲ್ಗೊಳ್ಳುತ್ತಿದ್ದೆ. ಆದರೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಅಗಮಿಸಿರುವ ಹೆಚ್ಡಿಕೆ, ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದರು. ಚನ್ನಪಟ್ಟಣದಲ್ಲಿನ ಕಾರ್ಯಕ್ರಮ ಈ ಮೊದಲೇ ನಿಗದಿಯಾಗಿತ್ತು. ಇನ್ನು ಇವತ್ತಿನ ಪ್ರತಿಭಟನಾ ಜಾಹೀರಾತಿನಲ್ಲಿ ನನ್ನ ಫೋಟೋ ಕೂಡ ಹಾಕಿದ್ದಾರಂತೆ. ಮುಂದೆ ಕುಮಾರಸ್ವಾಮಿಯನ್ನು ಬಂಧಿಸುತ್ತಾರೆ ಅಂತಾ ಜಾಹೀರಾತು ಹಾಕಿದ್ದಾರೆ. ಆದರೆ ಈ ಕುಮಾರಸ್ವಾಮಿಯನ್ನು ಯಾರು ಏನು ಮಾಡೋಕಾಗಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ಹೆದರುವ ಪ್ರಶ್ನೆಯೇ ಇಲ್ಲ ಎಂದರು.
ಇದೇ ವೇಳೆ ಡಿಕೆಶಿಯವರನ್ನು ಇಡಿ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ನಡೆದ ರ‍್ಯಾಲಿ ಬಗ್ಗೆ ಮಾತನಾಡಿ, ಆ ಕಾರ್ಯಕ್ರಮದ ಆಯೋಜಕರು ತರಾತುರಿಯಲ್ಲಿ ಪ್ರತಿಭಟನಾ ರ್ಯಾಲಿ ಆಯೋಜಿಸಿದ್ದಾರೆ. ನನಗೆ ಆಯೋಜಕರು ಪ್ರತಿಭಟನೆಗೆ ಆಹ್ವಾನ ನೀಡಿರಲಿಲ್ಲ. ಆದರೂ ಕೂಡ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇಂದು ಕ್ಷೇತ್ರದಲ್ಲಿನ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.