ರಾಮನಗರ : ಪರಿಜ್ಞಾನವಿಲ್ಲದ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಿಲ್ಲವೆಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರವಾಸೋದ್ಯಮ ಇಲಾಖೆ ಸಚಿವ ಸಿ ಪಿ ಯೋಗೇಶ್ವರ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ರಾಮನಗರದ ಡಿಹೆಚ್ಒ ಕಚೇರಿ ಬಳಿ ಕನ್ನಡ ಕೂಟ ನ್ಯೂಯಾರ್ಕ್ ಮತ್ತು ಅಮ್ಮಾ ಫೌಂಡೇಶನ್ ಸಹಯೋಗದೊಂದಿಗೆ ಸುಮಾರು 43 ಲಕ್ಷ ರೂ.ವೆಚ್ಚದ ಅಗತ್ಯ ವೈದ್ಯಕೀಯ ಉಪಕರಣ ವಿತರಿಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಆ ವ್ಯಕ್ತಿಗೆ ಏನು ಮಾತನಾಡಬೇಕು ಎನ್ನುವ ಪರಿಜ್ಞಾನ ಇಲ್ಲ. ಅಂತವರ ಬಗ್ಗೆ ನಾನೇನು ಮಾತನಾಡಲಿ?. ನಾನು ಮಂಡ್ಯ ಮೈಶುಗರ್ ವಿಚಾರವಾಗಿ ಸಿಎಂ ಭೇಟಿ ಮಾಡಿದ್ದೆ. ಖಾಸಗಿಯವರಿಗೆ ಕೊಡ ಬೇಡಿ ಎಂದು ಮನವಿ ಮಾಡಲು ಹೋಗಿದ್ದೆ. ನಾನೇನು ನನ್ನ ಸ್ವಂತ ಕೆಲಸಕ್ಕೆ ಹೋಗಿದ್ನಾ? ಎಂದು ಯೋಗೇಶ್ವರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಸರ್ಕಾರದ ಕೆಲಸಕ್ಕಾಗಿ ನಾನು ಸಿಎಂ ಅವರನ್ನ ಭೇಟಿ ಮಾಡಿದ್ದೆ. ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ. ರಾಮನಗರದ ರೇಷ್ಮೆ ಮಾರ್ಕೆಟ್ ವಿಚಾರವಾಗಿ ವಿಧಾನಸೌಧದಲ್ಲಿ ಸಭೆಗೂ ಹೋಗಿದ್ದೆ. ಆದ್ರೆ, ನಾನು ವೈಯಕ್ತಿಕ ಕೆಲಸಕ್ಕಾಗಿ ಯಾವ ಸಿಎಂ ಹತ್ತಿರ ಹೋಗಿಲ್ಲ.
ಯಾರ ಬಳಿಯೂ ರಾಜೀ ಆಗಿಲ್ಲ. ಇಂತಹ ವ್ಯಕ್ತಿಗಳಿಂದ ರಾಜಕೀಯದಲ್ಲಿ ಪಾಠ ಕಲಿಯಬೇಕಿಲ್ಲ. ನಾನು ಚನ್ನಪಟ್ಟಣದಲ್ಲಿ ಅವರಿಗೆ ಮುಳುವಾದೆ. ಹಾಗಾಗಿ, ಸದಾ ನನ್ನ ಬಗ್ಗೆ ಮಾತನಾಡುತ್ತಾರೆ. ನನ್ನ ಬಗ್ಗೆ, ಯಡಿಯೂರಪ್ಪ ಬಗ್ಗೆ ಮಾತನಾಡೋದೆ ಅವರಿಗೆ ಪ್ರಿಯ ಅಂತಾ ಟಾಂಗ್ ನೀಡಿದರು.
ಓದಿ: ಭಾರೀ ಮಳೆಯಿಂದ ಹಳ್ಳ-ಕೊಳ್ಳಗಳಲ್ಲ ನೀರೇ ನೀರು.. ಕೋಡಿ ಹರಿದ ಉಣಕಲ್ ಕೆರೆ, ಆತಂಕದಲ್ಲಿ ಧಾರವಾಡ ಜನ..