ರಾಮನಗರ: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ರೇಸ್‌ಗೆ ಹಲವು ಮಂದಿ ಇದ್ದಾರೆ. ಗೃಹಮಂತ್ರಿ ಜಿ. ಪರಮೇಶ್ವರ್ ರೇಸ್ನಲ್ಲಿಲ್ಲವೇ ಎಂದು ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದ ಎ.ವಿ.ಹಳ್ಳಿ ಗ್ರಾಮದಲ್ಲಿಂದು ಮಾತನಾಡಿದ ಅವರು, ಮೊನ್ನೆ ಸಿದ್ದರಾಮಯ್ಯ ಡಂಗುರ ಹೊಡೆದರು. ದಲಿತರ ಸಭೆ ಮಾಡಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದರು. ಆದರೆ ಪರಮೇಶ್ವರ್ ಅವರೇ ನಮ್ಮ ಪಕ್ಷದಲ್ಲಿ ದಲಿತ ಸಿಎಂ ಬಗ್ಗೆ ಧ್ವನಿ ಎತ್ತಿಲ್ಲ ಅಂದಿದ್ದಾರೆ. ನಾನು 2013ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ನಾನೇ ಅಧ್ಯಕ್ಷ ಆಗಿದ್ದೆ. ಆಗ ನನ್ನ ಹೆಸರನ್ನು ಯಾರೂ ಹೇಳಲಿಲ್ಲ ಅಂತ ಪರಮೇಶ್ವರ್ ಹೇಳಿದ್ದಾರೆ. ಈಗ ಅವರು ವಿಮರ್ಶೆ ಶುರು ಮಾಡಿದ್ದಾರೆ. ಈ ಪಕ್ಷದಲ್ಲಿ ಜನತೆಯ ಸಮಸ್ಯೆಗಿಂತ ಹೆಚ್ಚಾಗಿ ಆಂತರಿಕ ಕಲಹವಿದೆ ಎಂದು ವ್ಯಂಗ್ಯವಾಗಿ ಟೀಕಿಸಿದರು.
ರಾಜ್ಯದ ಜನತೆಗೆ ಕನ್ನಡಿಗರಿಗಾಗಿ ಕನ್ನಡಿಗನಿಗೆ ಅಧಿಕಾರ ಕೊಡಿ ಅಂತಾ ಕೇಳಿಕೊಂಡಿದ್ದೆ. ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಕೊಡಬೇಡಿ ಅಂತ ದಿನವೂ ಜಾಗಟೆ ಹೊಡೆದೆ. ಇವತ್ತು ಪ್ರತಿಯೊಂದಕ್ಕೂ ಅಲ್ಲಿಂದಲೇ ಡೈರೆಕ್ಷನ್ ಬರಬೇಕು. ಈಗ ಗ್ಯಾರಂಟಿಗಳ ಬಗ್ಗೆ ಅವರೇ ಬೆನ್ನು ತಟ್ಟಿಕೊಳ್ತಿದ್ದಾರೆ. ಅದು ಏನೇನ್ ಆಗುತ್ತೋ ನೋಡೊಣ. ಅವರು ಏನು ಮಾತು ಕೊಟ್ಟಿದ್ದಾರೆ ಹಾಗೆಯೇ ನಡೆದುಕೊಳ್ಳಲಿ. ಅದೇನೋ ನುಡಿದಂತೆ ನಡೆದ ಸರ್ಕಾರ ಅಂತ ಹೇಳ್ತಿದ್ದಾರಲ್ಲ ಮಾಡಲಿ ಎಂದರು.
ಅರ್ಕಾವತಿ ಕರ್ಮಕಾಂಡದ ತನಿಖೆ: ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದದ ಕುರಿತು ಪ್ರತಾಪ್ ಸಿಂಹ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಈ ಹಿಂದೆ ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತ ಹೇಳುತ್ತಿದ್ದರಲ್ಲ. ಇವತ್ತು ಪ್ರತಾಪ್ ಸಿಂಹ ಏನು ಹೇಳಿದ್ದಾರೆ. ಸತ್ಯ ಏನಿದೆ ಅಂತ ಬಿಜೆಪಿ-ಕಾಂಗ್ರೆಸ್ ನವರು ಹೇಳಬೇಕು. ಅರ್ಕಾವತಿ ಕರ್ಮಕಾಂಡದ ಬಗ್ಗೆ ಬೊಮ್ಮಾಯಿ ಯಾಕೆ ತನಿಖೆ ಮಾಡಲಿಲ್ಲ. ಮೂರು ವರ್ಷ ಇವರದ್ದೇ ಅಧಿಕಾರ ಇತ್ತಲ್ಲ. ಯಾಕೆ ಅವರನ್ನು ಕೊರಳು ಸೆರಗಲ್ಲಿ ಇಟ್ಕೊಂಡಿದ್ದಿರಿ ಎಂದು ಆರೋಪಿಸಿದರು.
ಈಗ ಕಾಂಗ್ರೆಸ್ನವರು ಹೇಳುತ್ತಿದ್ದರಲ್ಲಾ, ಬಿಜೆಪಿ ಸರ್ಕಾರದ ಬಗ್ಗೆ ತನಿಖೆ ಅಂತಾ. ಬರೆದಿಟ್ಟುಕೊಳ್ಳಿ ಯಾವುದೇ ತನಿಖೆ ಆಗುವುದಿಲ್ಲ. ಯಾವ ತನಿಖೆಯಿಂದಲೂ ರಾಜ್ಯ ಲೂಟಿ ಮಾಡಿದವರಿಗೆ ಏನೂ ತೊಂದರೆ ಆಗಲ್ಲ. ಬಿಜೆಪಿ ಸರ್ಕಾರದಲ್ಲೂ ತನಿಖೆ ನಡೆದು ಎಲ್ಲಾ ಹಳ್ಳಹಿಡಿಯಿತು. ಯಾವುದಕ್ಕೂ ತಾರ್ಕಿಕ ಅಂತ್ಯ ಇಲ್ಲ. ಬಿಜೆಪಿ- ಕಾಂಗ್ರೆಸ್ ಹೊಂದಾಣಿಕೆ ಬಗ್ಗೆ ಪ್ರತಾಪ್ ಸಿಂಹ ಹೇಳಾಯ್ತು, ಸಿ.ಟಿ.ರವಿ ಹೇಳಾಯ್ತು ಎಂದು ತಿಳಿಸಿದರು.
ಸುರ್ಜೆವಾಲಾಗೆ ಸಭೆ ಮಾಡುವ ಅಧಿಕಾರ ಕೊಟ್ಟಿದ್ದು ಯಾರು?: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೂ ರಾಜ್ಯದ ಜನತೆಗೂ ಸಂಬಂಧ ಇಲ್ಲ. ಸರ್ಕಾರದ ಅಧಿಕಾರಿಗಳ ಜೊತೆ ಸಭೆ ಮಾಡುವ ಯಾವುದೇ ಅಧಿಕಾರ ಇಲ್ಲ. ನಿನ್ನೆ ಅವರು ಸಭೆ ನಡೆಸುವ ಫೋಟೊ ಹೊರಬಂದಿದೆ. ಅವರ ಮಂತ್ರಿಗಳೇ ಅದನ್ನು ಹೊರಗೆ ಬಿಟ್ಟಿದ್ದಾರೆ. ಉಪಮುಖ್ಯಮಂತ್ರಿ ಎಷ್ಟು ಸುಳ್ಳು ಹೇಳ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ. ಅವರು ಹೇಳ್ತಾರೆ ಅದ್ಯಾವುದೋ ಶಾಂಗ್ರಿಲಾ ಹೋಟೆಲ್‌ನಲ್ಲಿ ಇವರು ಇದ್ದರಂತೆ. ಇವರನ್ನು ಕರೆದುಕೊಂಡು ಹೋಗೋದಕ್ಕೆ ಅಧಿಕಾರಿಗಳು ಬಂದಿದ್ದರಂತೆ. ಯಾವುದೇ ಸಭೆ ಮಾಡಿಲ್ಲ ಅಂತ ಹೇಳುತ್ತಾರೆ.
ಹೈಕಮಾಂಡ್‌ನ ಗುಲಾಮಗಿರಿ ಮಾಡೋದಿಕ್ಕೋ?: ಹಾಗಿದ್ರೆ ಆ ಟೇಬಲ್ ಮೇಲೆ ಕೂತಿದ್ದವರೆಲ್ಲಾ ಯಾರು?. ಅಲ್ಲಿ ಸಭೆ ನಡೆಸಿ ತೆಗೆದುಕೊಂಡಿರುವ ನಡಾವಳಿ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ಬಂದಿದೆ. ನಾಡಿನ ಜನತೆಗೆ ಎಷ್ಟರ ಮಟ್ಟಿಗೆ ಮಂಕುಬೂದಿ ಎರಚಿದ್ದಾರೆ ಅಂತ ಗೊತ್ತಾಗ್ತಿದೆ. ಇವರಿಗೆ ಜನ ಮತ ಕೊಟ್ಟಿರೋದು ರಾಜ್ಯದ ಮಂತ್ರಿಗಳು ಕೆಲಸ ಮಾಡೋದಿಕ್ಕೆ ಅಥವಾ ದೆಹಲಿ ಹೈಕಮಾಂಡ್‌ನ ಗುಲಾಮಗಿರಿ ಮಾಡೋದಿಕ್ಕೋ? ಗೊತ್ತಿಲ್ಲ ಎಂದರು. ಸುರ್ಜೆವಾಲಾ ಮೀಟಿಂಗ್ ಮಾಡಲು ಯಾರು ಪವರ್ ಕೊಟ್ಟಿದ್ದು?.
ಇದಕ್ಕೆ ಸರ್ಕಾರ ಲಘುವಾಗಿ ಉಡಾಫೆ ಉತ್ತರ ಕೊಡ್ತಿದ್ದಾರೆ. ಈ ಕೆಲಸ ಮಾಡೇ ಬಿಜೆಪಿಯವರು ಮನೆಗೆ ಹೋಗಿದ್ದು. ಇವರು ಬಂದು ಇನ್ನೂ 15 ದಿನ ಆಗಿಲ್ಲ. ಯಾರೋ ನಿಮ್ಮ ಪ್ರತಿನಿಧಿ ವಸೂಲಿಗೆ ಬಂದಿರೋದು. ಜನ ಉದ್ದಾರ ಮಾಡೋದಿಕ್ಕೆ ಬಂದಿಲ್ಲ. ಈ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಸಂಪತ್ತನ್ನ ಯಾವ ರೀತಿ ಲೂಟಿ ಮಾಡ್ತಿದ್ದಾರೆ ಗೊತ್ತಾಗ್ತಿದೆ. ಯಾವುದೇ ಸೂಚನೆ ಇದ್ರೆ ಕಾಂಗ್ರೆಸ್ ಕಚೇರಿ ಒಳಗೆ ಮಾಡ್ಕೊಳಿ. ಸರ್ಕಾರಿ ಅಧಿಕಾರಿಗಳ ಜೊತೆ ಕೂತು ಸೂಚನೆ ಕೊಡೋದಲ್ಲ. ಹಾಗಿದ್ರೆ ಅವರನ್ನೇ ಮುಖ್ಯಮಂತ್ರಿ ಮಾಡಿಕೊಳ್ಳಿ ಎಂದು ಕಿಡಿ ಕಾರಿದರು.
ದಶಪಥ ಹೆದ್ದಾರಿ ಟೋಲ್ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಅದಕ್ಕೆ ಎಚ್ಚರಿಕೆ ವಹಿಸಿ ಅಂದಿದ್ದೆ. ಒಂದು ಕಡೆ ಬೆಲೆ ಏರಿಕೆ ಬಗ್ಗೆ ಚರ್ಚೆ ಆಗ್ತಿದೆ. ಇನ್ನೊಂದೆಡೆ ನಾವು ಮಾಡಲಿಲ್ಲ ನಾವು ಮಾಡಲಿಲ್ಲ ಅಂತ ಹೇಳ್ಕೊತ್ತಿದ್ದಾರೆ. ವಿದ್ಯುತ್ ದರ ಏರಿಕೆ ಬಗ್ಗೆ ಒಬ್ಬರ ಮೇಲೊಬ್ಬರು ಆರೋಪ ಮಾಡ್ತಿದ್ದಾರೆ. ವಿದ್ಯುತ್ ದರ ಏರಿಕೆ ಮಾಡಿ ಯಾವ ಜ್ಯೋತಿ ಕಾರ್ಯಕ್ರಮ ಕೊಡ್ತಾರೆ ಕಾದು ನೋಡೋಣ ಎಂದು ಹೆಚ್ಡಿಕೆ ಲೇವಡಿ ಮಾಡಿದರು.
ಇನ್ನು, ಜಾತಿ ಗಣತಿಯಲ್ಲಿ ಯಾವುದೇ ವಾಸ್ತವಾಂಶ ಇಲ್ಲ. ಅಂದು ಮುಖ್ಯಮಂತ್ರಿ ಆಗಿದ್ದವರು ಅದನ್ನು ಬರೆಸಿಕೊಂಡಿದ್ದರು. ಅವತ್ತಿನ ಸೆಕ್ರೆಟರಿ ಅದಕ್ಕೆ ಸಹಿ ಹಾಕಿರಲಿಲ್ಲ. ಯಾರನ್ನೋ ಸಂತೋಷಪಡಿಸಲು ಸಿದ್ದಪಡಿಸಿರುವ ಜಾತಿಗಣತಿ ವರದಿ ಇದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಇದನ್ನೂಓದಿ:ನಾವು ಮತ್ತು ಬೊಮ್ಮಾಯಿ ಬೀಗರು, ನಮ್ಮ ಭೇಟಿ ರಾಜಕೀಯ ಪ್ರೇರಿತ ಅಲ್ಲ: ಶಾಮನೂರು ಶಿವಶಂಕರಪ್ಪ