ರಾಮನಗರ: ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಗಳು ಅನಾಥವಾಗಿವೆ. ಹೌದು, ಪ್ರತಿಮೆಗಳು ಜಿಲ್ಲಾಧಿಕಾರಿಗಳ ಆವರಣಕ್ಕೆ ತಲುಪಿ ತಿಂಗಳುಗಳೇ ಕಳೆದ್ರು ಕೂಡ ಈವರೆಗೂ ಪ್ರತಿಮೆ ಅನಾವರಣಕ್ಕೆ ಕಾಲ ಮಾತ್ರ ಕೂಡಿ ಬಂದಿಲ್ಲ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಆಕರ್ಷಣೆ ಕೇಂದ್ರವಾಗಿ ಈ ಎರಡು ಪ್ರತಿಮೆಗಳು ಮೂಡಿ ಬಂದಿದೆ. 14 ಅಡಿ ಎತ್ತರದ ಈ ಎರಡು ಪ್ರತಿಮೆಗಳು ಈಗಾಗಲೇ ಜಿಲ್ಲಾ ಕಚೇರಿ ಸಂಕೀರ್ಣಕ್ಕೆ ಬಂದು ಸುಮಾರು 8 ತಿಂಗಳುಗಳೇ ಆಗಿದ್ದು, ಅನಾವರಣಗೊಳ್ಳಲು ಇನ್ನೂ ಸಮಯ ನಿಗದಿಯಾಗಿಲ್ಲ.
ಬಿಡದಿಯ ವಿಜಯಕುಮಾರ್ ಎಂಬುವರು 14 ಅಡಿ ಎತ್ತರ ಹಾಗೂ 3.5 ಅಡಿ ಅಗಲದ ಅಂಬೇಡ್ಕರ್ ಪ್ರತಿಮೆಯನ್ನು ಕಂಚಿನಲ್ಲಿ ತಯಾರಿಸಿದ್ದಾರೆ. ಇದಕ್ಕಾಗಿ ಅವರು ಏಳು ತಿಂಗಳುಗಳ ಕಾಲ ಶ್ರಮ ವ್ಯಯಿಸಿದ್ದು, 40 ಲಕ್ಷ ರೂಪಾಯಿ ವೆಚ್ಚ ತಗುಲಿದೆಯೆಂದು ಅಂದಾಜಿಸಲಾಗಿದೆ. ಇದರಲ್ಲಿ 25 ಲಕ್ಷ ರೂ.ಗಳನ್ನು ಸಮಾಜ ಕಲ್ಯಾಣ ಇಲಾಖೆ ನೀಡಿದೆ.
ಕುದುರೆ ಮೇಲೆ ಕತ್ತಿ ಹಿಡಿದು ಕುಳಿತ ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರಿನ ರಾಮೋಹಳ್ಳಿಯ ಕಲಾವಿದ ಶಿವಕುಮಾರ್ ತಯಾರಿಸಿದ್ದಾರೆ. ಒಂದು ವರ್ಷವನ್ನು ಇದಕ್ಕಾಗಿ ಮೀಸಲಿಟ್ಟಿದ್ದು, ಜಿಲ್ಲಾ ಪಂಚಾಯತ್ 60 ಲಕ್ಷ ಅನುದಾನ ವ್ಯಯಿಸಿದೆ.
ಈ ಸುದ್ದಿಯನ್ನೂ ಓದಿ: ಬೆಳಗಾವಿಯಲ್ಲಿ ಸೈನಿಕ ಶಾಲೆ ಪ್ರಾರಂಭಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ
ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ವಿವಿಧ ಸಂಘಟನೆಗಳು ಬಹು ದಿನಗಳಿಂದ ಒತ್ತಾಯಿಸುತ್ತಲೇ ಬಂದಿದ್ದವು. ಕಳೆದ ಮೂರು ವರ್ಷಗಳ ಹಿಂದೆಯೇ ಸರ್ಕಾರ ಇದಕ್ಕೆ ಅನುಮೋದನೆ ಕೂಡ ನೀಡಿತ್ತು. ಆದ್ರೆ ಈವರೆಗೂ ಪ್ರತಿಮೆ ಅನಾವರಣಗೊಂಡಿಲ್ಲ. ಅಷ್ಟೇ ಅಲ್ಲದೆ, ಪ್ರತಿಮೆ ಅನಾವರಣ ಬಗ್ಗೆ ಯಾವುದೇ ಚರ್ಚೆ ಕೂಡ ನಡೆದಿಲ್ಲ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಸುತ್ತಲೂ ಕಂಪೌಂಡ್ ಹಾಗೂ ರಾತ್ರಿ ವೇಳೆ ಭದ್ರತೆ ಇರುವ ಕಾರಣ ಇಲ್ಲಿಯೇ ಪ್ರತಿಮೆ ಸ್ಥಾಪಿಸಲಾಗಿದೆ. ಅದಷ್ಟು ಬೇಗ ಪ್ರತಿಮೆಗಳು ಅನಾವರಣವಾಗಲಿ ಎಂಬುದು ಎಲ್ಲರ ಆಶಯ.