ರಾಮನಗರ: ನಗರದ ಮಲ್ಲೇಶ್ವರ ಬಡಾವಣೆಯ ಸರ್ಕಾರಿ ಬಾಲಮಂದಿರದಲ್ಲಿದ್ದ 7 ಬಾಲಕಿಯರು ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಪರಾರಿಯಾಗಿದ್ದಾರೆ. ಅವರೆಲ್ಲರೂ 18 ವರ್ಷದೊಳಗಿನವರು ಎನ್ನಲಾಗಿದೆ.
ಎಂಟು ಬಾಲಕಿಯರು ಮಾತನಾಡಿಕೊಂಡು ಬಾಲಮಂದಿರದಿಂದ ತಪ್ಪಿಸಿಕೊಳ್ಳಲು ಮುಂದಾದರು. ಅದರಲ್ಲಿ ಒಬ್ಬಳು ಗೇಟ್ ಹತ್ತುವಾಗ ತಲೆತಿರುಗಿ ಕೆಳಗೆ ಬಿದ್ದಿದ್ದಾಳೆ. ವಿಚಾರ ಗೊತ್ತಾದ ಕೂಡಲೇ ವಾರ್ಡನ್, ಕೆಳಗೆ ಬಿದ್ದ ಬಾಲಕಿಯನ್ನು ವಿಚಾರಣೆ ನಡೆಸಿದರು. ಆಗ ಏಳು ಬಾಲಕಿಯರು ಓಡಿಹೋಗಿರುವ ಕುರಿತು ಮಾಹಿತಿ ನೀಡಿದ್ದಾಳೆ.
18 ವರ್ಷ ತುಂಬಿದ ಬಳಿಕ ಬಾಲಮಂದಿರದಲ್ಲಿದ್ದ ಬಾಲಕಿಯರಿಗೆ ಸ್ವತಂತ್ರವಾಗಿ ಹೊರಗಡೆ ಹೋಗಲು ಅವಕಾಶ ನೀಡಲಾಗುತ್ತದೆ. 18 ವರ್ಷದೊಳಗಿನ, ಅದರಲ್ಲೂ ಪ್ರಮುಖ ಸಮಸ್ಯೆಗಳಿಗೆ ಒಳಗಾಗಿರುವ ಬಾಲಕಿಯರಿಗೆ ಹೊರ ಬಿಡುವುದಿಲ್ಲ. ಈಗ ತಪ್ಪಿಸಿಕೊಂಡವರು ಈ ಮೊದಲು ಕೂಡ ಎರಡು ಬಾರಿ ಪರಾರಿಯಾಗಲು ಪ್ರಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ಇಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯ ಕೂಡ ಇದೆ ಎನ್ನಲಾಗುತ್ತಿದೆ.
ಬಾಲಕಿಯರು ಓಡಿ ಹೋಗಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ದೂರಿನನ್ವಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಭಂದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.