ರಾಮನಗರ : ಬಿಡದಿ ಪಟ್ಟಣದ ಕೆಂಚನಕುಪ್ಪೆ ಜನತಾ ಕಾಲೋನಿಯಲ್ಲಿ ಬೀದಿ ನಾಯಿಗಳು 7 ವರ್ಷದ ಬಾಲಕಿಯನ್ನು ಸುತ್ತುವರಿದು ಕಚ್ಚಿ ಕೊಂದು ಹಾಕಿರುವ ಘಟನೆ ಜರುಗಿದೆ.
ನಾಯಿಗಳ ದಾಳಿಯಿಂದ ಮೃತಪಟ್ಟ ಬಾಲಕಿಯನ್ನು ಮೋನಿಕಾ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿ ಮೋನಿಕಾ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ಮಾಡಿ ತೀವ್ರ ಗಾಯಗೊಳಿಸಿದ್ದವು. ಬಾಲಕಿಯನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸೋಮವಾರ ಸಾವನ್ನಪ್ಪಿದ್ದಾಳೆ.
ಈ ಭಾಗದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಮಕ್ಕಳು ಓಡಾಡುವುದೇ ಕಷ್ಟವಾಗಿದೆ. ಈ ಬಗ್ಗೆ ಸ್ಥಳೀಯ ಪುರಸಭೆಗೆ ದೂರು ನೀಡಿದ್ದೇವೆ. ಆದರೆ ನಾಯಿ ಹಿಡಿಯುವ ಕಾರ್ಯಕ್ಕೆ ಇನ್ನೂ ಮುಂದಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.