ರಾಮನಗರ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಆಗಸ್ಟ್ 1 ರಿಂದ ಬೈಕ್ ಹಾಗೂ ಆಟೋಗಳಿಗೆ ನಿರ್ಬಂಧ ಮಾಡಲಾಗಿದೆ. ಈ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಈ ದಶಪಥ ಹೆದ್ದಾರಿಯಲ್ಲಿ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ದ್ವಿಚಕ್ರ ಹಾಗೂ ಮೂರು ಚಕ್ರದ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.
ಈ ದಶಪಥ ಹೆದ್ದಾರಿಯಲ್ಲಿ 80 ಕಿಲೋ ಮೀಟರ್ ದಿಂದ 100 ಕಿಲೋಮೀಟರ್ ವರೆಗೆ ವೇಗಮಿತಿಯಲ್ಲಿ ಚಲಿಸಲು ಅವಕಾಶ ಇರುವುದರಿಂದ ಅಪಘಾತ ತಡೆಯುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಈ ಕ್ರಮಕ್ಕೆ ಮುಂದಾಗಿದೆ. ಇದಲ್ಲದೆ ಈ ರಸ್ತೆಯಲ್ಲಿ ವೇಗಕ್ಕೆ ಹೊಂದಿಕೊಳ್ಳಲು ಹಾಗೂ ರಸ್ತೆ ಸುರಕ್ಷತೆಗೆ ಹೊಂದಿಕೊಳ್ಳದ ಕಾರಣ ದ್ವಿಚಕ್ರ ವಾಹನಗಳು ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್ಗಳು ಸೇರಿದಂತೆ ಕೆಲವು ವಾಹನಗಳ ಮೇಲೆ ನಿಷೇಧ ಮಾಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
ಈ ಹೆದ್ದಾರಿಯಲ್ಲಿ ಯಾವ ವಾಹನಗಳಿಗೆ ನಿಷೇಧ ಗೊತ್ತಾ..!: ಮೋಟಾರ್ ಸೈಕಲ್ಗಳು (ಸ್ಕೂಟರ್ ಹಾಗೂ ಇತರೆ ದ್ವಿಚಕ್ರ ವಾಹನಗಳು). ಮೂರು ಚಕ್ರದ ವಾಹನಗಳು (ಇ ಗಾಡಿಗಳು ಮತ್ತು ಇ ರಿಕ್ಷಾಗಳು). ಮೋಟಾರ್ ರಹಿತ ವಾಹನಗಳು. ಟ್ರೈಲರ್ಗಳ ಸಹಿತ ಹಾಗೂ ರಹಿತವಾದ ವಿಶೇಷ ಟ್ರ್ಯಾಕ್ಟರ್ಗಳು. ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು ಹೀಗೆ ವೇಗ ಮಿತಿ ಕಡಿಮೆ ಇರುವ ವಾಹನಗಳಿಗೆ ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ಸಂಪೂರ್ಣ ನಿಷೇಧ ಹೇರಲಾಗಿದೆ. ಆಗಸ್ಟ್ 1 ರಿಂದ ಈ ಹೆದ್ದಾರಿಯಲ್ಲಿ ದ್ವಿ ಚಕ್ರ ವಾಹನ, ಆಟೋ ಹಾಗೂ ಟ್ರ್ಯಾಕ್ಟರ್ ಸೇರಿದಂತೆ ಕೆಲ ಲಘು ವಾಹನಗಳಿಗೆ ಹೆದ್ದಾರಿ ಪ್ರಾಧಿಕಾರ ನಿಷೇಧ ಹೇರಿದೆ.
ಬೆಂಗಳೂರ- ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು: ಬೆಂಗಳೂರು- ಮೈಸೂರು ಹೈವೇ ಉದ್ಘಾಟನೆಯಾದಂದಿನಿಂದಲೇ ಹೆದ್ದಾರಿಗೆ ಅಪಘಾತಗಳಿಂದಾಗಿ ಕಪ್ಪುಚುಕ್ಕೆ ಬಂದಿದೆ. ಹೆದ್ದಾರಿಯಲ್ಲಿ ಬ್ಯಾಕ್ ಟು ಬ್ಯಾಕ್ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಹೆದ್ದಾರಿ ಕಾಮಗಾರಿ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಸಂಸದ ಪ್ರತಾಪ್ ಸಿಂಹ ಅವರು ಕೂಡ ಮಾಧ್ಯಮಗೋಷ್ಟಿ ನಡೆಸಿ, ಅಪಘಾತಗಳಿಗೆ ಚಾಲಕರ ಅಜಾಗರೂಕತೆ ಕಾರಣವೇ ಹೊರತು ಹೆದ್ದಾರಿ ಕಾಮಗಾರಿ ಕಾರಣವಲ್ಲ ಎನ್ನುವ ಸ್ಪಷ್ಟನೆಯನ್ನೂ ಕೊಟ್ಟಿದ್ದರು. ಇದೀಗ ಹೆಚ್ಚುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.