ರಾಮನಗರ : ರೈತರೊಬ್ಬರನ್ನು ದಲ್ಲಾಳಿಯೆಂದು ಭಾವಿಸಿ ಮಾರುಕಟ್ಟೆಗೆ ತಂದಿದ್ದ ರೇಷ್ಮೆ ಗೂಡನ್ನ ಮಾರುಕಟ್ಟೆ ಅಧಿಕಾರಿ ಸೀಜ್ ಮಾಡಿದ್ದರಿಂದ ಬೇಸತ್ತು ರೈತನೊಬ್ಬ ವಿಷ ಕುಡಿಯಲು ಮುಂದಾದ ಪ್ರಸಂಗ ರಾಮನಗರದಲ್ಲಿ ನಿನ್ನೆ ನಡೆದಿದೆ.
ರಾಮನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಮಂಡ್ಯ ತಾಲೂಕಿನ ಬಿ.ಯರಹಳ್ಳಿ ಗ್ರಾಮದ ಯೋಗೇಶ್ ಎಂಬ ರೈತ ಬೆಳೆದ ರೇಷ್ಮೆ ಗೂಡು ಮಾರಾಟಕ್ಕೆಂದು ಬಂದಿದ್ದ ವೇಳೆ ಕೆಜಿ ಗೂಡಿಗೆ ನಿನ್ನೆ 245 ರೂ.ಗೆ ಹರಾಜು ಮಾಡಲಾಗಿತ್ತು. ಆನಂತರ ಇವನು ರೈತ ಅಲ್ಲ ದಲ್ಲಾಳಿ ಎಂದು ಗೂಡು ಖರೀದಿಸಿರಲಿಲ್ಲ. ನಂತರ ರೇಷ್ಮೆ ಗೂಡನ್ನು ಸೀಜ್ ಮಾಡಲಾಗಿತ್ತು.
ಅದೇ ರೇಷ್ಮೆ ಗೂಡನ್ನ ರೈತನಿಗೆ ಅಧಿಕಾರಿಗಳು ವಾಪಸ್ ನೀಡಿದ್ದರು. ಆದರೆ ಸೀಜ್ ಮಾಡಿದ ಗೂಡು ಹಾಳಾಗಿದ್ದು, ಕಡಿಮೆ ತೂಕ ಬರುತ್ತಿದೆ. ಅಲ್ಲದೆ ನಿನ್ನೆ ದರಕ್ಕೂ ಇಂದಿನ ದರಕ್ಕೂ ಕೆಜಿಗೆ ನೂರು ರೂಪಾಯಿ ಕಡಿಮೆಯಾಗಿದೆ ಎಂದು ಮನ ನೊಂದು ವಿಷ ಕುಡಿಯಲು ವಿಷದ ಬಾಟಲ್ ಕೈಯಲ್ಲಿ ಹಿಡಿದು ನಿಂತಿದ್ದ ರೈತನನ್ನು ಸಮಾಧಾನಪಡಿಸಲು ಪಕ್ಕದಲ್ಲಿದ್ದ ರೈತರು ಹರಸಾಹಸ ಪಡಬೇಕಾಯಿತು.
ಆತ್ಮಹತ್ಯೆಗೆ ಪ್ರಯತ್ನಿಸಿ ಕೈಯಲ್ಲಿ ವಿಷದ ಬಾಟಲ್ ಹಿಡಿದು ಅಧಿಕಾರಿಯ ಜೊತೆ ಮಾತಿನ ಚಕಮಕಿ ನಡೆಸಿದ ರೈತ ತನಗಾದ ಅಪಮಾನ ಮತ್ತು ನಷ್ಠವನ್ನು ಅಧಿಕಾರಿಗಳೇ ತುಂಬಿಕೊಡಬೇಕೆಂದು ಪಟ್ಟು ಹಿಡಿದಿದ್ದ. ನಂತರ ಪೋಲೀಸರು ಮಧ್ಯಪ್ರವೇಶಿಸಿ ರಾಜಿ ಸಂಧಾನ ನಡೆಸಿದ್ದರಿಂದ ಪರಿಸ್ಥಿತಿ ತಿಳಿಯಾಗಿದೆ.