ರಾಮನಗರ : ರಾಮನಗರ ಸಂಸದರು ಜಿಲ್ಲೆಗೆ ಕೊಟ್ಟಂತಹ ಕೊಡುಗೆ ಏನು.? ನನ್ನನ್ನು ಸುಳ್ಳುಗಾರ ಎನ್ನುತ್ತಾರೆ. ಇವರು ಏನು ಮಾಡಿದ್ದಾರೆ. ನನ್ನ ಮೇಲೆ ಆರೋಪ ಮಾಡಿದರೆ ಸುಮ್ಮನೆ ಇರಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ಸಂಸದ ಡಿಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಡದಿ ತೋಟದ ಮನೆಯಲ್ಲಿ ಮಾತನಾಡಿದ ಅವರು, ಡಿಕೆ ಸುರೇಶ್ ಈಗ ರಾಜಕೀಯಕ್ಕೆ ಬಂದವರು. ಇವರ ರೀತಿ ಕನಕಪುರದ ಬಂಡೆ ಒಡೆದಿಲ್ಲ. ಪಿಎಮ್ಜಿಎಸ್ ಯೋಜನೆ ಮೊದಲು ಇರಲಿಲ್ಲ. ನಾನು ಮೂರು ಸೇತುವೆ ನಿರ್ಮಾಣ ಮಾಡಲು ಹೊರಟಿದ್ದೆ.
ನಾನು ಸಂಸದನಾಗಿ 3 ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದೆ. ನಂತರ ಗ್ರಾಮ ಸಡಕ್ ಯೋಜನೆ ಬಂತು. ಬಳಿಕ ವಾಜಪೇಯಿ ಅವಧಿಯಲ್ಲಿ ಪಿಎಮ್ಜಿಎಸ್ ಯೋಜನೆ ಆಯ್ತು. ಈ ಯೋಜನೆ ತಂದ ಕೀರ್ತಿ ದೇವೇಗೌಡರಿಗೆ ಸಲ್ಲಬೇಕು. ಯಾರೋ ಮಾಡಿದಕ್ಕೆ ಹೆಸರು ಹಾಕಿಕೊಳ್ಳಲು ಇವರು ಬರ್ತಾರೆ ಎಂದು ವಾಗ್ಧಾಳಿ ನಡೆಸಿದರು.
ರಾಮನಗರದ ಕೈಲಂಚ ಗ್ರಾಮದಲ್ಲಿನ ತೆಂಗಿನಕಲ್ಲು ಕೆರೆ ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಡಿಪಿಆರ್ ಬಗ್ಗೆ ತಿಳಿದುಕೊಂಡು ಪತ್ರ ಬರೆದಿದ್ದಾರೆ. ಅಷ್ಟರಲ್ಲಿ ಕೆರೆ ತುಂಬಿಸಲು ಎಲ್ಲ ಕೆಲಸ ಆಗಿತ್ತು. ಈಗ ತೆಂಗಿನಕಲ್ಲು ಕೆರೆ ಕಾರ್ಯಕ್ರಮ ಮಾಡುತ್ತಿದ್ದಾರೆ. ನೀವು ಏನು ಡಾಕ್ಯುಮೆಂಟ್ ಬಿಡುಗಡೆ ಮಾಡೋದು, ನನ್ನ ಬಳಿ ಎಲ್ಲಾ ದಾಖಲೆಗಳು ಇವೆ. ನಾನು ಸಿಎಂ ಆಗಿದ್ದಾಗ ತೆಂಗಿನಕಲ್ಲು ಕೆರೆ ಭರ್ತಿಗೆ ₹16 ಕೋಟಿ ಹಣ ಬಿಡುಗಡೆ ಮಾಡಿದ್ದೆ. ಈಗ ಇವರು ಬಂದು ರಾಜಕಾರಣ ಮಾಡುತ್ತಿದ್ದಾರೆ.
ರಾಮನಗರದಲ್ಲಿ ಸುಳ್ಳು ಹೇಳಿ ರಾಜಕೀಯ ಮಾಡಲು ಆಗಲ್ಲ. ಎಂಪಿ ಗ್ರ್ಯಾಂಟ್ ಎಷ್ಟು ಬಿಡುಗಡೆ ಮಾಡಿದ್ದಾರೆ. ಕೇವಲ ಚಿತಾಗಾರದ ಮುಂದೆ ಫೋಟೋ ತೆಗೆಸಿಕೊಳ್ಳುತ್ತಾರೆ. ಜನರನ್ನು ಸಾಯಿಸಿ ಅವರಿಗೆ ಬೆಂಕಿ ಇಡಲು ಬಂದಿದ್ದಾರೆ. ಇವರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.
ಹಾಗೆಯೇ ಹಾರೋಹಳ್ಳಿ ತಾಲೂಕು ಕೇಂದ್ರ ಮಾಡಿದ್ದೇನೆ. ಇವರ ಕಾಟ ತಪ್ಪಿಸಲು ತಾಲೂಕು ಕೇಂದ್ರ ಮಾಡಿದ್ದೇನೆ. ಇವರ ಜೊತೆ ಇರುವ ಎಂಎಲ್ಸಿಯಂತೆ ದಲ್ಲಾಳಿ ಕೆಲಸ ಮಾಡಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇತ್ತಲ್ಲ, ಆಗ ಏಕೆ ಯಾವುದೇ ಯೋಜನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಹೇಳಲ್ವ ಮೇಕೆದಾಟು ಡಿಪಿಆರ್ ಬಗ್ಗೆ. ಡಿಪಿಆರ್ ಬಗ್ಗೆ ನಾನು ಮಾಡಿದ್ದು ಈ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡುತ್ತೇನೆ. ಇವರ ರೀತಿ ಸುಳ್ಳು ಹೇಳಲು ಹೋಗಲ್ಲ. ಈಗ ನಮ್ಮ ನೀರು ನಮ್ಮ ಹಕ್ಕು ಅಂತಾರೆ. ಕೋವಿಡ್ ಸಮಯದಲ್ಲಿ ಪಾದಯಾತ್ರೆ ಹೊರಟಿದ್ದರು. ಇದಲ್ಲದೆ ರಾಮನಗರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಇವರಿಂದ ಕಲಿಯಬೇಕಿಲ್ಲ. ಜಿಲ್ಲಾಸ್ಪತ್ರೆ ಬಸವನಪುರಕ್ಕೆ ತೆಗೆದುಕೊಂಡು ಹೊರಟಿದ್ದರು ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ ನಡೆಸಿದರು.
ರಾಜೀವ್ ವಿವಿ ಹಾಗೂ ನೂತನ ಜಿಲ್ಲಾಸ್ಪತ್ರೆ ನನ್ನ ಕನಸಿನ ಕೂಸು ಎಂದು ಸಚಿವ ಅಶ್ವತ್ಥ್ ನಾರಾಯಣ್ ವೇದಿಕೆ ಮೇಲೆ ಭಾಷಣ ಬಿಗಿದ್ದಿದ್ದರಲ್ಲ, ಈಗ ಈ ಎರಡು ಯೋಜನೆ ಜಾರಿಗೊಳಿಸಲಿ. ನನ್ನ ಕನಸಿನ ಯೋಜನೆ ಸಾಕಾರಗೊಳಿಸಲಿ ಎಂದು ಹೆಚ್‌ಡಿಕೆ ಸಚಿವರಿಗೆ ಟಾಂಗ್ ನೀಡಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ