ರಾಮನಗರ : ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕೆಂಬ ಆಸೆ ಇದೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನನ್ನ ಕೇಳಿ ಅವರು ನಾಮಪತ್ರ ಹಾಕಿಲ್ಲ. ಈಗ ಯಾಕಾಗಿ ವಾಪಾಸ್ಸು ತೆಗೆಯುತ್ತಿದ್ದಾರೆ ಅನ್ನೋ ಮಾಹಿತಿ ಕೂಡ ನನಗಿಲ್ಲ. ಯಾರು ಬಿಜೆಪಿ ಸರ್ಕಾರ ತರುವ ನಿಟ್ಟಿನಲ್ಲಿ ಪರೋಕ್ಷವಾಗಿ ಬೆಂಬಲ ನೀಡಿದ್ರೋ ಅವರಿಗೆ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕೆಂಬ ಆಸೆಯಿದೆ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ರು.
ಕಾಂಗ್ರೆಸ್ ನಾಯಕರೇ ನಾಮಪತ್ರ ಹಿಂಪಡೆಯಬೇಕೆಂದು ತೀರ್ಮಾನ ಮಾಡಿಕೊಂಡಾಗ ಅಭ್ಯರ್ಥಿ ಹೇಗೆ ಮುಂದುವರೆಯುತ್ತಾರೆ. ಹಾಗಾಗಿ ಅಭ್ಯರ್ಥಿ ಬಹುಶಃ ಸ್ಪರ್ಧೆಯಿಂದ ಹಿಂದೆ ಸರಿದಿರಬೇಕು. ಈ ವಿಚಾರದಲ್ಲಿ ನಮ್ಮ ಪಾತ್ರವೇನಿಲ್ಲ. ಸಮಾನ ಮನಸ್ಕರ ಮತ ಪಡೆಯಲು ಪ್ರಯತ್ನ ಪಡ್ತೇವೆ ಅವಕಾಶ ಕೊಡಿ ಎಂದು ರೇವಣ್ಣರನ್ನ ಕಾಂಗ್ರೆಸ್ ನಾಯಕರು ಭೇಟಿ ಮಾಡಿದ್ರು. ರೇವಣ್ಣ ಅದರ ಮೇಲೆ ಅರ್ಜಿ ಹಾಕಲು 10 ಶಾಸಕರ ಸಹಿ ಹಾಕಿಸಿಕೊಟ್ಟಿದ್ರು. ಆದ್ರೆ ಸಿದ್ದರಾಮಯ್ಯನವರು ನಾವು ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸಲ್ಲ ಎಂದು ಅಭ್ಯರ್ಥಿಗೆ ಹೇಳಿದ್ದಾರೆ. ಬಿಜೆಪಿಯ ಅಭ್ಯರ್ಥಿ ಗೆಲ್ಲಬೇಕು ಅಂತಾ ಹೇಳಿದ್ದಾರಂತೆ, ಅದಕ್ಕೆ ಅವರು ವಾಪಾಸ್ಸು ತೆಗೆದುಕೊಳ್ಳುತ್ತಿದ್ದು, ನಮಗೆ ಅದರ ಸಂಬಂಧವಿಲ್ಲ ಎಂದರು.
ನಾನು ಎಂಎಲ್‌ಸಿ ಚುನಾವಣಾ ಸಂಬಂಧ ಯಾವುದೇ ಗಮನ ಕೊಟ್ಟಿಲ್ಲ. ಇದರಲ್ಲಿ ನನ್ನದೇನು ಜವಾಬ್ದಾರಿಯೂ ಇಲ್ಲ. ರಾಜ್ಯ ರಾಜಕೀಯದಲ್ಲಿ ಬದಲಾವಣೆ ವಿಚಾರವಾಗಿ ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ನಾನು ಭವಿಷ್ಯಗಾರನೂ, ಜ್ಯೋತಿಷಿಯೂ ಅಲ್ಲ. ರಾಜಕೀಯದ ಕೆಲವು ಬೆಳವಣಿಗೆ ಬಗ್ಗೆ ಹೇಳಿರಬಹುದು ಎಂದರು.