ರಾಮನಗರ: ಜಾತ್ಯತೀತ ಜನತಾ ದಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಡಿ.16 ರ ಶುಕ್ರವಾರ (ಇಂದು) ಬಿಡುಗಡೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ನಡೆಯಲಿರುವ ಪಂಚ ರತ್ನ ಯಾತ್ರೆಗೆ ನಿನ್ನೆ ಸಂಜೆ ಮಾಗಡಿಯಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಮ್ಮ ಪಾರ್ಟಿ ಮುಂದಿನ ಚುನಾವಣೆಯಲ್ಲಿ ಸ್ವಂತವಾಗಿ ಅಧಿಕಾರಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ಪಕ್ಷದ ಸ್ಪಷ್ಟ ಗುರಿಯನ್ನು ಜನತೆಗೆ ತಿಳಿಸುವ ಸಲುವಾಗಿ ಪಂಚ ರತ್ನ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆ ಈಗಾಗಲೇ ಸಾಗಿ ಬಂದಿರುವ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ ಎಂದರು.
ರಾಮನಗರ ಜಿಲ್ಲೆಯಲ್ಲಿ ಗುರವಾರದಿಂದ ಮುಂದಿನ ನಾಲ್ಕು ದಿನಗಳ ಕಾಲ ಯಾತ್ರೆ ಸಂಚಾರ ಮಾಡಲಿದ್ದು, ನಂತರ ಮಂಡ್ಯಯಲ್ಲಿ ಸಾಗಿ ಜ.3 ರಿಂದ ಬೀದರ್ ಜಿಲ್ಲೆಯಲ್ಲಿ ನಡೆಯಲಿದೆ. ಅಲ್ಲದೇ, ಮುಂದಿನ ಮಾರ್ಚ್ 20ರ ವರೆಗೆ ರಾಜ್ಯದ 120 ಕ್ಷೇತ್ರಗಳಲ್ಲಿ ಪಂಚ ರತ್ನ ಯಾತ್ರೆಯ ಮೂಲಕ ಪಕ್ಷ ಸಂಘಟನೆ ಮಾಡಲಾಗುವುದು. ಕ್ಷೇತ್ರದ ಅಭ್ಯರ್ಥಿಗಳು ಯಾರು ಎನ್ನುವ ವಿಚಾರದ ಬಗ್ಗೆ ಎಲ್ಲರಿಗೂ ಸಹಜವಾಗಿಯೇ ಕುತೂಹಲವಿದೆ. ಇದಕ್ಕೆ ಶುಕ್ರವಾರ ಮೊದಲ ಹಂತದಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಪಕ್ಷಾತೀತ ಕಾರ್ಯಕ್ರಮ: ಶ್ರೀನಿವಾಸ ಕಲ್ಯಾಣೋತ್ಸವವು ನಮ್ಮ ಪಕ್ಷದ ಕಾರ್ಯಕ್ರಮವಲ್ಲ, ಪಕ್ಷಾತೀತ ಕಾರ್ಯಕ್ರಮ. ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ನಮ್ಮ ಕುಟುಂಬ ಶ್ರೀನಿವಾಸ ಕಲ್ಯಾಣದ ಮೂಲಕ ಜನರಿಗೆ ಒಳಿತನ್ನು ಕೋರುತ್ತಿದೆ. ಈ ಉತ್ಸವವನ್ನು ತಿರುಪತಿ ತಿಮ್ಮಪ್ಪ ದೇವಾಲಯದ 80 ಅರ್ಚಕರ ತಂಡ ನಡೆಸಿಕೊಡುತ್ತಿದ್ದು, ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಬಹುದು. ಜೊತೆಗೆ ಈ ಕಾರ್ಯಕ್ರಮದಲ್ಲಿ ದೇವೇಗೌಡರು ಮತ್ತು ಚನ್ನಮ್ಮ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಜೆಡಿಎಸ್ ಪಂಚರತ್ನ ಯಾತ್ರೆಗೆ ಮಾಂಡೌಸ್ ಅಡ್ಡಿ.. ವೇಳಾಪಟ್ಟಿಯಲ್ಲಿ ಬದಲಾವಣೆ
ಮಾಗಡಿ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ: ಮಾಗಡಿ ಶಾಸಕ ಎ. ಮಂಜುನಾಥ್ ಮಾಗಡಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷ ಅಧಿಕಾರದಲ್ಲಿ ಇಲ್ಲದ ಹೊರತಾಗಿಯೂ ಎಲ್ಲರ ಸಹಕಾರ ಪಡೆದುಕೊಂಡು ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದರು. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಮಾಗಡಿಗೆ ಆಗಮಿಸಿದ ಹೆಚ್ ಡಿ ಕೆ, ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಗೋ ಪೂಜೆ ನಡೆಸಿ ಆಶೀರ್ವಾದ ಪಡೆದರು.
ಇದನ್ನೂ ಓದಿ: ಪಂಚರತ್ನ ಯಾತ್ರೆ ಹೋದಲೆಲ್ಲ ಯಶಸ್ಸು ಕಂಡಿದೆ: ನಿಖಿಲ್ ಕುಮಾರಸ್ವಾಮಿ