ರಾಮನಗರ: ರಾಮನಗರ ಜಿಲ್ಲೆ ಬಿಡದಿಯಲ್ಲಿ ಮಾತನಾಡಿದ ಹಾಲಿ ಶಾಸಕ ಎ ಮಂಜುನಾಥ್, ನಾನು ಶಾಸಕನಾದ ಕಳೆದ ನಾಲ್ಕೂವರೆ ವರ್ಷ ಬಿಡದಿ ಪುರಸಭೆ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹೆಚ್ಚು ಅನುದಾನ ತಂದು ಕೆಲಸ ಮಾಡಿದ್ದೇನೆ. ಆದರು ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಸಂಸದರಿಗೆ ಕಾಂಗ್ರೆಸ್ ಸದಸ್ಯರು ಸುಳ್ಳು ಹೇಳಿ ಅವರನ್ನು ಕೂಡ ದಿಕ್ಕು ತಪ್ಪಿಸುತ್ತಿದ್ದಾರೆ. ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ. ಲೋಪ ಇದ್ದರೆ ನನಗೆ ತಿಳಿಸಿದರೆ ಸರಿ ಮಾಡುತ್ತೇನೆ ಎಂದರು.
ನನ್ನ ಅಭಿವೃದ್ಧಿ ಕೆಲಸದ ಬಗ್ಗೆ ಪ್ರಶ್ನೆ ಮಾಡುವವರು ಚರ್ಚೆಗೆ ಬರಲಿ. ಪಟ್ಟಿ ಸಮೇತ ಉತ್ತರ ಕೊಡುತ್ತೇನೆಂದು ಬಿಡದಿ ಪುರಸಭಾ ಸದಸ್ಯರಿಗೆ ಶಾಸಕ ಮಂಜುನಾಥ್ ಟಾಂಗ್ ನೀಡಿದರು.
ನನ್ನನ್ನು ವಿಲನ್ ಮಾಡಲು ಯತ್ನ: ಕಾಂಗ್ರೆಸ್ ನವರು ನನ್ನನ್ನು ವಿಲನ್ ಮಾಡಲು ಹೊರಟಿದ್ದಾರೆ. ಆದರೆ ಇದ್ಯಾವುದೂ ನನ್ನ ಹತ್ತಿರ ನಡೆಯಲ್ಲ. ಜನ ಈಗಾಗಲೇ ಬಿಡದಿ ಪುರಸಭೆಯ ರಿಸಲ್ಟ್ ಕೊಟ್ಟಿದ್ದಾರೆ. ಕಾಂಗ್ರೆಸ್ನ್ನು ಎಲ್ಲಿ ನಿಲ್ಲಿಸಿದ್ದಾರೆ ಅಂತ ಒಮ್ಮೆ ನೋಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರಿಂದ ನಕಲಿ ದಾಖಲೆ ಆರೋಪ: ಮಾಜಿ ಶಾಸಕರು ನಕಲಿ ದಾಖಲೆ ಸೃಷ್ಟಿಸಿ ಹಣ ಮಾಡಲು ಹೊರಟಿದ್ದಾರೆ. ಅಧಿಕಾರಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದು, ನಕಲಿ ಖಾತೆ ಮಾಡಿ ದುಡ್ಡು ಮಾಡಿದ್ದೀರಿ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡುತ್ತೇನೆ ಎಂದು ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಹಾಲಿ ಶಾಸಕ ಎ.ಮಂಜುನಾಥ್ ಗುಡುಗಿದರು.
ಇದನ್ನೂ ಓದಿ: ಮಾಜಿ ಸಚಿವರು ಹತಾಶರಾಗಿದ್ದಾರೆ.. ಯೋಗೇಶ್ವರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ