ರಾಮನಗರ: ಕೆಎಸ್ಆರ್ಟಿಸಿ ಬಸ್, ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ತಂದೆ ಮಗ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚನ್ನಪಟ್ಟಣ ತಾಲೂಕಿನ ಕೋಟಮಾರನಹಳ್ಳಿ ಗ್ರಾಮದ ಸಿದ್ದಯ್ಯ (60 ವರ್ಷ), ಅವರ ಮಗ ಅರುಣ್ (27 ವರ್ಷ) ಅಪಘಾತದಲ್ಲಿ ಮೃತಪಟ್ಟವರು.
ಕೆಲಸ ನಿಮಿತ್ತ ತಂದೆ ಮಗ ದ್ವಿಚಕ್ರ ವಾಹನದಲ್ಲಿ ಚನ್ನಪಟ್ಟಣಕ್ಕೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಅರುಣ್ ಸ್ಥಳದಲ್ಲೇ ಸಾವಿಗೀಡಾದರೆ, ಸಿದ್ದಯ್ಯ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಕೆರೆ ಏರಿಯ ಬದಿಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದಿದೆ. ಕೆರೆ ಏರಿ ರಸ್ತೆ ಬದಿಯಲ್ಲಿ ತಡೆಗೋಡೆ ಇದ್ದ ಕಾರಣ ಬಸ್ನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಅದೃಷ್ಟವಶಾತ್ ತಪ್ಪಿದ ಅನಾಹುತ: ಕೆರೆ ಏರಿಯ ಮೇಲೆ ತಡೆಗೋಡೆ ಇದ್ದ ಪರಿಣಾಮ ಆಗಬಹುದಾದ ದೊಡ್ಡ ಅನಾಹುತವೊಂದು ತಪ್ಪಿದೆ. ಬಸ್ ಹಳೆಯದಾದ್ದರಿಂದ ಬಸ್ ಸ್ಟೇರಿಂಗ್ ಕಟ್ ಆಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕೆರೆ ಏರಿಯ ಬದಿಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ನಿಂತಿದೆ. ಒಂದು ವೇಳೆ ಕೆರೆ ಏರಿ ರಸ್ತೆ ಬದಿಯಲ್ಲಿ ತಡೆಗೋಡೆ ಇಲ್ಲದಿದ್ದರೆ ಬಸ್ ಕೆರೆಗೆ ಉರುಳಿಬಿದ್ದು ದೊಡ್ಡ ದುರಂತವೇ ಸಂಭವಿಸುತಿತ್ತು. ತಡೆಗೋಡೆ ಇದ್ದ ಕಾರಣ ಬಸ್ನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಕೂಡ ಚಿಕ್ಕದಾಗಿದ್ದು, ರಸ್ತೆ ಅಗಲೀಕರಣಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಐದಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ; ಫರ್ನಿಚರ್ ಶೋರೂಂ ಅಗ್ನಿಗಾಹುತಿ
ಧಾರವಾಡ ಬಳಿ ಅಪಘಾತದಲ್ಲಿ ಮೂವರು ಸಾವು: ಭಾನುವಾರ ರಾತ್ರಿ ಧಾರವಾಡ ತಾಲೂಕಿನ ಶಿವಳ್ಳಿ ಬಳಿ ಕ್ರೂಸರ್ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾಮದ ಬಸವರಾಜ್ ಕುರಹಟ್ಟಿ (45), ಯಲ್ಲಪ್ಪ ಘಂಟಿ (55), ಧಾರವಾಡ ಗೊಲ್ಲರ್ ಓಣಿ ನಿವಾಸಿ ರೋಹನ್ ಅಂಗಡಿ (25) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿತ್ತು. ಈ ವೇಳೆ ಕ್ರೂಸರ್ನಲ್ಲಿದ್ದ 13 ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಂದು ಬೆಳಗ್ಗೆ ಬೈಕ್ ಸವಾರ ರೋಹನ್ ಮೃತಪಟ್ಟಿದ್ದಾನೆ.