ರಾಮನಗರ : ಅಧಿಕಾರಿಯ ಸೋಗಿನಲ್ಲಿ ವಂಚಿಸುತ್ತಿದ್ದ ನಕಲಿ ಐಎಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಶೀರ್ ಎಂಬ ಯುವಕನೇ ಬಂಧಿತ ಆರೋಪಿ.
ಬಂಧಿತ ಶಶೀರ್ ಕಗ್ಗಲೀಪುರ ಠಾಣೆ ವ್ಯಾಪ್ತಿಯ ಬೆಂಗಳೂರಿನ ದಕ್ಷಿಣ ತಾಲೂಕಿನ ಸಾಲು ಹುಣಸೆ ಬ್ರಿಗೇಡ್ ಮೆಂಡೋಸ್‌ನಲ್ಲಿ ವಾಸವಿದ್ದ. ಸೆಂಟ್ರಲ್ ಗೌರ್ನಮೆಂಟ್ನಲ್ಲಿ ಮಿನಿಸ್ಟರಿ ಆಫ್ ಹೋಂ ಆಫೀಸರ್ ಹುದ್ದೆಯಲ್ಲಿರುವುದಾಗಿ ಈತ ಎಲ್ಲರನ್ನು ನಂಬಿಸಿದ್ದ.
ಆರೋಪಿ ಮೂಲತಃ ಮಹಾರಾಷ್ಟ್ರದ ಜಲಗಾಂ ಜಿಲ್ಲೆಯ ಜಮನೇರ್ ಗ್ರಾಮದ ನಿವಾಸಿ. ವರ್ಕಿಂಗ್ ಇನ್ ಸೌತ್‌ಜೋನ್ ಕಮಾಂಡೋ ಎನ್ನುವ ಐಡಿ ಕಾರ್ಡ್ ತೋರಿಸಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ವಂಚಿಸುತ್ತಿದ್ದ.
ಅಲ್ಲದೇ ನಕಲಿ ಐಡಿ ಕಾರ್ಡ್ ತೋರಿಸಿ ಜನರು ಹಾಗೂ ಊದಿಪಾಳ್ಯದ ಶ್ರೀ ರವಿಶಂಕರ್ ಗುರೂಜಿ ಆಶ್ರಮದವರಿಗೆ ಹಣ ವಂಚಿಸಿದ್ದ ಆರೋಪ ಕೂಡ ಈತನ ಮೇಲಿದೆ. ಆಶ್ರಮಕ್ಕೆ ಸೇರಿದ್ದ ಸಿವಿಲ್ ವ್ಯಾಜ್ಯಗಳಲ್ಲಿ ಕೂಡ ಈತ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಆರೋಪಿಯಿಂದ ನಕಲಿ ಐಡಿ ಕಾರ್ಡ್, ಇನ್ನೋವಾ ಕಾರು ಹಾಗೂ ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 170, 171, 182, 186, 419 ಹಾಗೂ 420 ಅಡಿ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.