ರಾಮನಗರ: ಜನರು ಕೊಟ್ಟಿರುವ ತೀರ್ಪನ್ನು ಮೊದಲು ಅರಗಿಸಿಕೊಳ್ಳಲಿ. ಆಮೇಲೆ ಜೆಡಿಎಸ್ ಉಳಿಯತ್ತೋ ಬಿಡತ್ತೋ ಎಂಬುದನ್ನ ಜನರೇ ತೀರ್ಮಾನ ಮಾಡ್ತಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಪುರಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿ ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು, ಪಾಪ ಅವರಿಗೆ ನನ್ನ ಪಕ್ಷದ ಚಿಂತೆ ಯಾಕೆ? ಜೆಡಿಎಸ್‌ನ ಮುಗಿಸುತ್ತೇವೆ ಎಂದು ಟೋಪಿ ಹಾಕಿ ಹೋದ್ರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇಕೆದಾಟು ಕಾಂಗ್ರೆಸ್ ಕೊಡುಗೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, 1996ರಲ್ಲಿ ದೇವೇಗೌಡರು ಸಿಎಂ ಆದಾಗ ಮೇಕೆದಾಟು ಯೋಜನೆಗೆ ನೀಲಿ ನಕ್ಷೆ ತಯಾರು ಮಾಡಿದ್ರು. ಈ ಯೋಜನೆ ಕಾಂಗ್ರೆಸ್ ಕೊಡುಗೆ ಅಲ್ಲ. ನಾನು ಮುಖ್ಯಮಂತ್ರಿಯಾದಾಗ ಮೇಕೆದಾಟು ಯೋಜನೆಯ ಡಿಪಿಆರ್ ಮಾಡಿದ್ದು. ಇದಕ್ಕಾಗಿ ನಾನು ಹಲವಾರು ಭಾರಿ ಪ್ರಧಾನಮಂತ್ರಿ, ಕೇಂದ್ರ ಸಚಿವರನ್ನ ಭೇಟಿ ಮಾಡಿದ್ದೇನೆ ಎಂದು ಹೇಳಿದರು.
ವೋಟ್‌ಗಾಗಿ ಕಾಂಗ್ರೆಸ್ 'ಮೇಕೆದಾಟು' ಪಾದಯಾತ್ರೆ
1962ರಲ್ಲಿ ಪಕ್ಷೇತರ ಶಾಸಕರಾಗಿ ವಿಧಾನಸಭೆಯಲ್ಲಿ ರೆಜುಲೇಶನ್ ಪಾಸ್ ಮಾಡಲು ನಿಲುವು ತೆಗೆದು ಕೊಂಡಿದ್ದರು. ಹೀಗಾಗಿ ಹಾರಂಗಿ, ಹೇಮಾವತಿ, ಇಗ್ಗಲೂರು ಸೇರಿದಂತೆ ಹಲವು ಜಲಾಶಯಗಳಾಗಿವೆ. ಇದು ದೇವೇಗೌಡರು ರಾಜಕೀಯ ಜೀವನದಲ್ಲಿಕೊಟ್ಟಿರುವ ಕೊಡುಗೆಯಾಗಿದೆ. ನೀರಾವರಿ ಬಗ್ಗೆ ಜನತಾದಳಕ್ಕೆ ಇರುವ ಕಮಿಟ್‌ಮೆಂಟ್ ಇನ್ನಾವ ಪಕ್ಷಗಳಿಗೂ ಇಲ್ಲ.
ಈ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ದೇವೇಗೌಡರ ಬಯೋಗ್ರಾಫಿಕ್ ಪುಸ್ತಕದಲ್ಲಿದೆ. ಅದರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಏನು ಹೇಳಿದ್ದಾರೆ ಎಂಬುದನ್ನ ನೀವೇ ನೋಡಿ ಎಂದರು.
2013ರಲ್ಲಿ ಮತ ಹಾಕಿಸಿಕೊಳ್ಳಲು ಕಾಂಗ್ರೆಸ್ ನಡೆ ಕೃಷ್ಣೆಯ ಕಡೆಗೆ ಮಾಡಿದ್ದರು. ಈಗ ಮೇಕೆದಾಟು ಹಿಡಿದುಕೊಂಡು 176 ಕಿ.ಮೀ ಪಾದಯಾತ್ರೆ ಮಾಡುತ್ತಿರುವುದು ವೋಟ್ ಹಾಕಿಸಿಕೊಳ್ಳಲು ಅಷ್ಟೇ. ಕೆಲಸ ಮಾಡೋಕೆ ಇರೋದು ಜನತಾ ದಳ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಸತ್ಯಗಾಲ ನೀರಾವರಿ ಯೋಜನೆ ಸಂಸದ ಡಿ.ಕೆ.ಸುರೇಶ್ ಮಾಡಿಸಿದ್ದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೋ ಹೋ.. ಅವರು ದೊಡ್ಡ ನೀರಾವರಿ ತಜ್ಞರು. ಯಾಕೆ 5 ವರ್ಷ ಸರ್ಕಾರ ಇತ್ತಲ್ಲ ಆಗ್ಲೆ ಮಾಡ್ಲಿಲ್ಲ.
ಸಿಎಂ ಆಗಿ ಆರ್ಥಿಕ ಸಚಿವನಾಗಿ 580 ಕೋಟಿ ರೂ.ಕೊಟ್ಟು ಕೆಲಸ ಪ್ರಾರಂಭ ಮಾಡಿಸಿದ್ದು ನನ್ನ ಕಾಲದಲ್ಲಿ. ನಮ್ಮ ರೈತರಿಗೆ ಅನುಕೂಲ ಮಾಡಲು ಸಿಕ್ಕ ಅವಕಾಶದಲ್ಲಿ ಪ್ರಾಮಾಣಿಕವಾಗಿ ದುಡಿಮೆ ಮಾಡಿದ್ದೇವೆ. ಇವರ ಹಾಗೆ ಬೊಗಳೆ ಬಿಟ್ಟು ಸುಳ್ ಸುಳ್ ಹೇಳಿಕೊಂಡಿದ್ದಾರೆ. ಇದರಿಂದ ಜನರ ಪರಿತಪ್ಪಿಸುತ್ತಾರೆ. ಪಾಪ ಇವರಿಗೆ ಕಂಡವರ ಜಮೀನುಗಳಿಗೆ ಬೇಲಿ ಹಾಕಿಸಲು ಟೈಮ್ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಜ.9 ರಿಂದ ಮೇಕೆದಾಟು ಪಾದಯಾತ್ರೆ: ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಡಿ.ಕೆ. ಶಿವಕುಮಾರ್