ರಾಮನಗರ: ಕೊರೊನಾ ವೈರಸ್ ರಾಜ್ಯದಲ್ಲೂ ಜನತೆ ನಿದ್ದೆಗೆಡಿಸಿದ್ದು, ಇವತ್ತು ರಾಮನಗರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕೂಡ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು.
ಈ ವೇಳೆ ಮಾತನಾಡಿದ ಜಿಪಂ ಅಧ್ಯಕ್ಷ ಬಸಪ್ಪ, ನಮ್ಮ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಪತ್ತೆಯಾಗೋದು ಬೇಡ ಅಂತಾ ದೇವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಬಿಡದಿ ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಕಂಪನಿಗಳಿಗೆ ಹೊರ ದೇಶದಿಂದ ಬರುವ ಉದ್ಯೋಗಿಗಳ ತಪಾಸಣೆ ಮಾಡಲು ಆದೇಶ ಮಾಡಲಾಗಿದೆ ಎಂದರು.
ಇನ್ನೂ ಆರೋಗ್ಯಾಧಿಕಾರಿ ಡಾ.ನಿರಂಜನ್ ಮಾತನಾಡಿ, ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 6 ಬೆಡ್ನ ಸುಸಜ್ಜಿತ ಕೊಠಡಿಗಳನ್ನ ತೆರೆಯಲಾಗಿದೆ. ಅಲ್ಲದೇ ಪ್ರತಿ ಗ್ರಾಮಗಳಲ್ಲಿ ಈ ವೈರಸ್ ತಡೆಯುವ ಸಂಬಂಧ ತಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಿತ್ತಿ ಪತ್ರಗಳನ್ನ ಮನೆ ಮನೆಗೆ ವಿತರಣೆ ಮಾಡಲಾಗಿದೆ. ಬಿಡದಿಯ ವಿವಿಧ ಕಂಪನಿಗಳಿಗೆ 28 ಮಂದಿ ಉದ್ಯೋಗಿಗಳು ಹೊರ ದೇಶದಿಂದ ಬಂದಿದ್ದಾರೆ. ಅವರಲ್ಲಿ ಯಾರಿಗೂ ಕೊರೊನಾ ವೈರಸ್ ಕಂಡು ಬಂದಿಲ್ಲ. ಅಲ್ಲದೇ ಅಷ್ಟು ಜನರನ್ನ ಪ್ರತಿನಿತ್ಯ ತಪಾಸಣೆ ಮಾಡಲಾಗುತ್ತಿದ್ದು, ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.