ರಾಮನಗರ: ಕನ್ನಡದ ಚಿತ್ರ ರಸಿಕರ ಮನದಲ್ಲಿ ಅಣ್ಣಾವ್ರು ಎಂದೇ ಜನಜನಿತರಾದ ಡಾ. ರಾಜ್ಕುಮಾರ್, ಸಿನಿಮಾ ಪಾತ್ರಗಳ ಮೂಲಕ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದರು. ಬದುಕಿದ್ದಾಗ ಆದರ್ಶ ಮೌಲ್ಯಗಳನ್ನು ಸಾರಿದ್ದ ಕನ್ನಡದ ಕಣ್ಮನಿ, ಮರಣ ಹೊಂದಿದ ಬಳಿಕ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದರು. ಅವರ ನೇತ್ರದಾನ ಸಂದೇಶದಿಂದ ಉತ್ತೇಜಿತರಾದ ಔಷಧಿ ವ್ಯಾಪಾರಿಗಳು ನೇತ್ರಾ ಕೇಂದ್ರವನ್ನು ಸ್ಥಾಪಿಸಿದ್ದು, ನೇತ್ರದಾನದ ಮಹತ್ವ ಸಾರುತ್ತಿದ್ದಾರೆ.
ತಮ್ಮ ಕಣ್ಣುಗಳಿಂದ ಇಬ್ಬರು ಅಂಧರಿಗೆ ಕಣ್ಣುಗಳು ಬರುವುದಾದ್ರೆ ನಾನು ಮಾತ್ರವಲ್ಲ ಇಡೀ ಮನೆಯವರ ಕಣ್ಣುಗಳನ್ನು ದಾನ ಮಾಡಲು ಸಿದ್ಧರಿದ್ದೇವೆ. ನಿಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರಿಗೆ ನೆರವಾಗಿ ಎಂಬ ಸಂದೇಶವನ್ನು ಡಾ. ರಾಜ್ ಸಾರಿದ್ದರು. ಅವರ ಈ ಮಾತಿನಿಂದ ಸ್ಫೂರ್ತಿಗೊಂಡ ರಾಮನಗರ ಜಿಲ್ಲೆ ಬಿಡದಿಯ ಔಷಧಿ ವ್ಯಾಪಾರಸ್ಥರು, ಏಪ್ರಿಲ್ 4, 2009ರಲ್ಲಿ ಬೆಂಗಳೂರಿನ ನಾರಾಯಣ ನೇತ್ರಾಲಯ ಸಹಕಾರದೊಂದಿಗೆ ಡಾ. ರಾಜ್ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರವನ್ನು ಸ್ಥಾಪನೆ ಮಾಡಿದ್ರು. ಅಂದು ಪಾರ್ವತಮ್ಮ ರಾಜ್ಕುಮಾರ್ ಹಾಗೂ ಆದಿ ಚುಂಚನಗಿರಿಯ ಡಾ. ಬಾಲಗಂಗಾಧರಾನಾಥ ಸ್ವಾಮೀಜಿ ಈ ನೇತ್ರ ಕೇಂದ್ರಕ್ಕೆ ಚಾಲನೆ ನೀಡಿದ್ದರು.
ಈ ನೇತ್ರ ಕೇಂದ್ರದ ವಿಶೇಷವೆಂದ್ರೆ ಮೃತರ ಮನೆಗೆ ಹೋಗಿ ನೇತ್ರದಾನದ ಬಗ್ಗೆ ಮನವೊಲಿಸಿ, ಕಣ್ಣುಗಳನ್ನು ಶೇಖರಣೆ ಮಾಡಲಾಗುತ್ತದೆ. ಸಾವಿನ ನೋವಿನಲ್ಲಿರುವ ಕುಟುಂಬಸ್ಥರ ಮನವೊಲಿಸಿ ಕಣ್ಣು ಸಂಗ್ರಹ ಮಾಡುವುದು ದೊಡ್ಡ ಸಾಹಸವೇ ಸರಿ. ಕೆಲ ದಾನಿಗಳು ಸ್ವಇಚ್ಛೆಯಿಂದ ದಾನ ಮಾಡುತ್ತಾರೆ. ಮತ್ತೆ ಕೆಲವರು ಕಣ್ಣು ನೀಡಲು ನಿರಾಕರಿಸುತ್ತಾರೆ. ಇಂತಹ ಸನ್ನಿವೇಶದ ನಡುವೆ ನೇತ್ರಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ ಈ ನೇತ್ರಾಲಯಕ್ಕೆ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಈ ನಡುವೆ ಈ ನೇತ್ರಾಲಯದ ಸಹಕಾರದೊಂದಿಗೆ ಬೆಂಗಳೂರಿನ ಮೈಕ್ರೋ ಲ್ಯಾಬ್ ಪ್ರೈ.ಲಿ ಮಾಲೀಕರಾದ ದಿಲೀಪ್ ಸುರಾನಾ, ಪ್ರತೀ ವರ್ಷ ಲಕ್ಷಾಂತ ರೂ. ಖರ್ಚು ಮಾಡಿ ಕಣ್ಣಿನ ತಪಾಸಣೆ ನಡೆಸಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ ಮಾಡಿಕೊಂಡು ಬರುತ್ತಿದ್ದಾರೆ. ಇನ್ನು ಪ್ರತಿಯೊಬ್ಬರು ಸತ್ತಾಗ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕಿದೆ.